ಹುಬ್ಬಳ್ಳಿ: ಗಂಗಾ ನದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಪುಣ್ಯ ಸ್ನಾನ ಮಾಡಿದರೂ ಪಾಪ ತೊಳೆಯುವುದಿಲ್ಲ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡಿಸಿರುವ ವಿಧಾನಸಭೆ ವಿಪಕ್ಷ ನಾಯಕ ಅರವಿಂದ ಬೆಲ್ಲದ, ಪೋಪ್ ದರ್ಶನಕ್ಕೆ ರೋಮ್ ಗೆ ಹೋಗುವ ಸೋನಿಯಾ ಗಾಂಧಿ ಅವರಿಗೆ ಏಕೆ ಇಂತಹ ಪ್ರಶ್ನೆ ಕೇಳುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅರವಿಂದ ಬೆಲ್ಲದ, ಮುಸ್ಲಿಂ ಸಮುದಾಯದವರಿಗೆ ಹಣ ನೀಡಿ ಮೆಕ್ಕಾಕ್ಕೆ ಕಳುಹಿಸುತ್ತೀರಿ. ಅವರಿಗೇಕೆ ಈ ರೀತಿ ಪ್ರಶ್ನೆ ಕೇಳುವುದಿಲ್ಲ ಎಂದಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರದ್ದು ಬೇಜವಾಬ್ದಾರಿತನದ ಹಾಗೂ ಹಿಂದುಗಳ ಭಾವನೆಗೆ ಧಕ್ಕೆ ಉಂಟುಮಾಡುವ ಹೇಳಿಕೆ ಆಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಜಗತ್ತಿನ ನಾನಾ ಭಾಗದ ಜನರು ಪ್ರಯಾಗ್ರಾಜ್ನಲ್ಲಿರುವ ತ್ರಿವೇಣಿ ಸಂಗಮಕ್ಕೆ ಸ್ನಾನಕ್ಕೆ ಬರುತ್ತಿದ್ದಾರೆ. ಮಹಾಕುಂಭಮೇಳ ಐತಿಹಾಸಿಕ ಧಾರ್ವಿುಕ ಕಾರ್ಯಕ್ರಮವಾಗಿದೆ. ಭಾರತದ ಮೂಲೆ ಮೂಲೆಗಳಿಂದಷ್ಟೆ ಅಲ್ಲದೇ, ವಿದೇಶಗಳಿಂದಲೂ ಜನರು ಶ್ರದ್ಧಾ ಭಕ್ತಿಯಿಂದ ಪ್ರಯಾಗ್ರಾಜ್ಗೆ ಹೋಗುತ್ತಿದ್ದಾರೆ ಎಂದು ಹೇಳಿದರು.
ಕೇಂದ್ರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂಬ ಸಚಿವ ಸಂತೋಷ ಲಾಡ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅರವಿಂದ ಬೆಲ್ಲದ, ಕೇಂದ್ರದ ಆರ್ಥಿಕ ಸ್ಥಿತಿ ಪ್ರಬಲವಾಗಿದೆ. ಆದರೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಇಳಿದಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸುವತ್ತ ದೃಷ್ಟಿ ನೆಟ್ಟಿರುವ ಕಾಂಗ್ರೆಸ್ ಸರ್ಕಾರ, ರಾಜ್ಯದ ಸಂಪೂರ್ಣ ಅಭಿವೃದ್ಧಿ ನಿರ್ಲಕ್ಷಿಸಿದೆ. ಮತ್ತೊಂದೆಡೆ ಗ್ಯಾರಂಟಿ ಯೋಜನೆಗಳೂ ವಿಫಲವಾಗುತ್ತಿವೆ ಎಂದು ತಿರುಗೇಟು ನೀಡಿದರು.