ಹುಬ್ಬಳ್ಳಿ : ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುಮು ಅವರು ಕರಿ ಮೆಣಸಿನ ರಾಣಿ ಚೆನ್ನಬೈರಾದೇವಿಯ ಗೌರವಾರ್ಥ ಅಂಚೆ ಇಲಾಖೆ ಹೊರ ತಂದ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು.
ಕನ್ನಡ ನಾಡಿನ ಧೀಮಂತ ವ್ಯಕ್ತಿತ್ವದ ಧೀರ, ಸಾಹಸಿ ರಾಣಿ ಚೆನ್ನಬೈರಾದೇವಿಯ ವ್ಯಕ್ತಿತ್ವವನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ರಾಷ್ಟ್ರಪತಿ ಅವರು ಅಂಚೆ ಚೀಟಿ ಲೋಕಾರ್ಪಣೆಗೊಳಿಸಿದರು.
ಭಾರತೀಯ ಅಂಚೆ ಇಲಾಖೆ ಹಾಗೂ ಮೂಡಬಿದಿರೆಯ ಎಕ್ಸಲೆಂಟ್ ಎಜ್ಯುಕೇಶನ್ ಸಹಭಾಗಿತ್ವದಲ್ಲಿ ಅಂಚೆ ಚೀಟಿ ಬಿಡುಗಡೆ ಸಮಾರಂಭ ನೆರವೇರಿತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿದರು.
ರಾಜ್ಯಸಭಾ ಸದಸ್ಯ ಪದ್ಮಶ್ರೀ ಡಾ. ವೀರೇಂದ್ರ ಹೆಗ್ಗಡೆ, ಎಸ್ಡಿಎಂಇ ಸೊಸೈಟಿ ಉಪಾಧ್ಯಕ್ಷ ಸುರೇಂದ್ರ ಹೆಗ್ಗಡೆ ಉಪಸ್ಥಿತಿಯಲ್ಲಿ ಮೂಡಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಆಧ್ಯಕ್ಷ ಯುವರಾಜ ಜೈನ ಮತ್ತು ನೈಋತ್ಯ ರೈಲ್ವೆ ವಲಯ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ಅವರು ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿ ಅವರ ಬೆಳ್ಳಿ ಮೂರ್ತಿಯನ್ನು ರಾಷ್ಟ್ರಪತಿ ಅವರಿಗೆ ನೀಡಿ, ಗೌರವಿಸಿದರು.
ಮೂಡಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ, ಮಧು ಕುಂದೂರ, ಮೀರಾ ಕುಂದೂರ ಅವರು ಪ್ರಸಿದ್ಧ ಇಳಕಲ್ ಸೀರೆಯನ್ನು ರಾಷ್ಟ್ರಪತಿಯವರಿಗೆ ನೀಡಿ, ಸನ್ಮಾನಿಸಿದರು.
ಎಕ್ಸಲೆಂಟ್ ಕಾಲೇಜಿನ ಆಡಳಿತ ನಿರ್ದೇಶಕ ಡಾ. ಸಂಪತ್ ಕುಮಾರ, ಹುಬ್ಬಳ್ಳಿ ಸಂಸ್ಕಾರ ಶಾಲೆಯ ಅಧ್ಯಕ್ಷ ಮಹಾವೀರ ಕುಂದೂರ, ಲೇಖಕ ಡಾ. ಗಜಾನನ ಶರ್ವ, ಉದ್ಯಮಿ ಸಂತೋಷ ಪಾಟೀಲ, ಸಮಾಜ ಸೇವಕ ವಿಮಲ್ ತಾಳಿಕೋಟೆ ಉಪಸ್ಥಿತರಿದ್ದರು.