ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವ ಎಂ.ಬಿ. ಪಾಟೀಲರು ಕೆಡಿಪಿ ಸಭೆ ನಡೆಸಿದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸಂಟ್ ಡಿಸೋಜಾ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಪಂ ಸಿಇಒ ರಿಷಿ ಆನಂದ ಮತ್ತಿತರರಿದ್ದಾರೆ. 
ಜಿಲ್ಲೆ

ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ, ಅಧಿಕಾರಿಗಳ ಬೆವರಳಿಸಿದ ಸಚಿವ ಎಂ.ಬಿ. ಪಾಟೀಲ

ವಿಜಯಪುರ: ಜೂಜಾಟ, ಕ್ರಿಕೆಟ್ ಬೆಟ್ಟಿಂಗ್, ಸಾರಾಯಿ ಅಕ್ರಮ ಮಾರಾಟ, ಗುಂಟಾ ಪ್ಲಾಟ್‌ಗಳ ದಂಧೆ ಸೇರಿದಂತೆ ಹಲವು ಅಕ್ರಮಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಅಕ್ರಮ ಎಸಗುವವರು ಯಾವುದೇ ಪಕ್ಷ-ಯಾವುದೇ ವ್ಯಕ್ತಿ ಇದ್ದರೂ ಸರಿ ಒಳಗೆ ಹಾಕುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರಾಯಿ ಅಕ್ರಮ ಮಾರಾಟಕ್ಕೆ ತಡೆಯೊಡ್ಡುವಂತೆ ಕಳೆದ ಸಭೆಯಲ್ಲಿ ಕಟ್ಟುನಿಟ್ಟಾಗಿ ಸೂಚಿಸಲಾಗಿತ್ತು. ಈವರೆಗೂ ಅಕ್ರಮ ಮಾರಾಟಕ್ಕೆ ಕಡಿವಾಣ ಬಿದ್ದಿಲ್ಲ. ಅಬಕಾರಿ ಇಲಾಖೆಯವರು ತಮ್ಮ ಗುರಿ ತಲುಪಲು ಪರೋಕ್ಷವಾಗಿ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿರುವುದು ಬೆಳಕಿಗೆ ಬಂದಿದೆ. ಖಿಲಾರಿದೊಡ್ಡಿ, ಶೇಗುಣಸಿ, ಮದಗುಣಕಿ, ನಾಗರಾಳ, ಕುಮಟೆ, ಬಿಜ್ಜರಗಿಯಲ್ಲೂ ಅಕ್ರಮ ಮದ್ಯ ಆರಂಭವಾಗಿದೆ. ಕೂಡಲೇ ಅಕ್ರಮ ತಡೆಯಬೇಕು. ಇಲ್ಲವಾದಲ್ಲಿ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದರು.

ಎಸ್‌ಪಿ ಋಷಿಕೇಶ ಸೋನಾವಣೆ ಮಾತನಾಡಿ, ಶೇಗುಣಸಿ, ಮದಬಾವಿ ಮತ್ತಿತರ ಭಾಗಗಳಲ್ಲಿ ಮದ್ಯ ಮಾರಾಟದ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಅಂಥ ಪ್ರಕರಣ ಕಂಡು ಬಂದಲ್ಲಿ ಕ್ರಮ ಜರುಗಿಸಲಾಗಿದೆ ಎಂದು ಸಚಿವರಿಗೆ ವರದಿಯೊಪ್ಪಿಸಿದರು.

ಅಬಕಾರಿ ಇಲಾಖೆ ಅಧಿಕಾರಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 64 ಕೇಸ್ ದಾಖಲಿಸಿ 81ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದರು.
ಅದಕ್ಕೆ ಸಚಿವರು, ಕಾಟಾಚಾರದ ದಾಳಿ ಬೇಡ. ಅಕ್ರಮ ಎಸಗುವವರು ಯಾರೇ ಆಗಿರಲಿ ಒಳಗೆ ಹಾಕಿ. ಕಾಂಗ್ರೆಸ್-ಬಿಜೆಪಿ ಅಷ್ಟೇ ಏಕೆ ಎಂ.ಬಿ. ಪಾಟೀಲರ ಫಾಲೋವರ್ ಎಂದು ಹೇಳಿಕೊಳ್ಳುವವರು ಇದ್ದರೂ ಸರಿ ಕ್ರಮ ಕೈಗೊಳ್ಳಿ ಎಂದರು.

ನನ್ನ ಕ್ಷೇತ್ರದಲ್ಲಿ ಮದ್ಯದ ಅಂಗಡಿಗಳ ಪರವಾನಿಗೆ ಇರುವ ಗ್ರಾಮ ಹೊರತುಪಿಡಿಸಿ ಯಾವೊಂದು ಗ್ರಾಮಕ್ಕೂ ಎಂಎಸ್‌ಐಎಲ್ ಪರವಾನಿಗೆ ನೀಡಿಲ್ಲ. ಎಷ್ಟೋ ಕಾರ್ಯಕರ್ತರು ಬಂದು ಮನವಿ ಮಾಡಿದರೂ ಸುತಾರಾಂ ಒಪ್ಪಿಲ್ಲ. ಅವರು ಕೋಪಿಸಿಕೊಂಡರೂ ಸರಿ, ನನ್ನಿಂದ ಮದ್ಯ ಮಾರಾಟ ಮಳಿಗೆ ಆರಂಭವಾಗಬಾರದು ಎಂಬ ಕಾರಣಕ್ಕೆ ನಿರಾಕರಿಸಿದ್ದೇನೆ. ಅಂಥ ಗ್ರಾಮಗಳಿಗೆ ಅಕ್ರಮವಾಗಿ ಸಾರಾಯಿ ಹೋದರೆ ನನಗೆ ಹೇಗಾಗಬೇಡ? ಎಂದು ಸಚಿವರು ಕಾಳಜಿಪೂರ್ವಕವಾಗಿ ನುಡಿದರು.

ನಗರದಲ್ಲಿ ಗುಂಟಾ ಪ್ಲಾಟ್ ಹಾವಳಿ ಹೆಚ್ಚಾಗಿದೆ. ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಸಾರ್ವಜನಿಕರಿಗೂ ತೊಂದರೆಯಾಗಿದೆ. ಹೀಗಾಗಿ ಗುಂಟಾ ಲೇಔಟ್ ನಿರ್ಮಿಸುವವರ ಮೇಲೆ ಕ್ರಮ ಆಗಬೇಕು. ಬದಲು ಸಾರ್ವಜನಿಕರ ಮೇಲೆ ಕ್ರಮ ಕೈಗೊಳ್ಳುವುದಲ್ಲ ಎಂದು ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ್‌ಗೆ ಸಚಿವರು ಚಾಟಿ ಬೀಸಿದರು.

ಪುನರ್ವಸತಿ ಕೇಂದ್ರಗಳಾದ ಜೈನಾಪುರ, ಕಣಬೂರ ಪ್ಲಾಟ್ ಕೂಡ ಬಿಡುತ್ತಿಲ್ಲವೆಂದರೆ ಹೇಗೆ? ಒಬ್ಬರೇ ಒಬ್ಬ ರಾಜಕೀಯ ವ್ಯಕ್ತಿ ಸುಮಾರು 200 ಪ್ಲಾಟ್ ಖರೀದಿ ಮಾಡಿಕೊಂಡಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ ಕಿಡಿ ಕಾರಿದರು.

ಮಕ್ಕಳ ಸಾವಿನ ಪ್ರಕರಣ

ಇಂಡಿ ರಸ್ತೆಯಲ್ಲಿರುವ ನೀರು ಶುದ್ದೀಕರಣ ಘಟಕದಲ್ಲಿ ಬಿದ್ದು ಮೂರು ಜನ ಮಕ್ಕಳು ಸಾವಿಗೀಡಾದ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಚಿವರು, ಭದ್ರತಾ ಸಿಬ್ಬಂದಿ ಎಲ್ಲಿದ್ದರು? ಮಕ್ಕಳ ಸಾವಿಗೆ ಯಾರು ಹೊಣೆ? ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್ ಪ್ರತಿಕ್ರಿಯಿಸುತ್ತಾ, ಆಗಾಗಲೇ ಓರ್ವ ಸಿಬ್ಬಂದಿಯನ್ನು ಅಮಾನತ್ತುಗೊಳಿಸಲಾಗಿದೆ. ಸುತ್ತಲೂ ತಂತಿಬೇಲಿ ಹಾಕಲಾಗಿದೆ ಎಂದು ಸಮಜಾಯಿಷಿ ನೀಡಿದರು.

ಆಗ ಸಚಿವರು, ಅನಾಹುತಕ್ಕೂ ಮುನ್ನವೇ ಎಚ್ಚೆತ್ತುಕೊಳ್ಳಲು ಏನು ಸಮಸ್ಯೆ? ಸಾವು ಉಂಟಾದರೆ ಮಾತ್ರ ಎಚ್ಚೆತ್ತುಕೊಳ್ಳುವುದಾ? ನಿಮ್ಮದೇ ಮಕ್ಕಳಿಗೆ ಇಂಥ ಅನಾಹುತವಾಗಿದ್ದರೆ ಸುಮ್ಮನಿರುತ್ತಿದ್ರಾ? ಎಂದು ಆಕ್ರೋಶ ಹೊರಹಾಕಿದರು. ಅಲ್ಲದೇ ಇಂಜಿನೀಯರ್ ಸಹಿತ ಸಂಬಂಧಿಸಿದ ಅಧಿಕಾರಿಯನ್ನೂ ಅಮಾನತ್ತುಗೊಳಿಸಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಸರ್ಕಾರಿ ಶಾಲೆ ಸ್ಥಿತಿಗತಿ

ಸರ್ಕಾರಿ ಶಾಲೆಗಳ ಸ್ಥಿತಿಗತಿ ಪರಿಶೀಲಿಸಿ. ದುರಸ್ಥಿ ಕೈಗೊಳ್ಳಿ. ಅಗತ್ಯ ಎನ್ನಿಸಿದರೆ ಬಾಡಿಗೆ ಪಡೆಯಿರಿ. ಯಾವುದಾದರೂ ಅನಾಹುತ ಸಂಭವಿಸಿದಲ್ಲಿ ಜಿಲ್ಲಾಡಳಿತವನ್ನೇ ಹೊಣೆಯನ್ನಾಗಿಸುವುದಾಗಿ ಸಚಿವ ಎಂ.ಬಿ. ಪಾಟೀಲ ಎಚ್ಚರಿಸಿದರು.

ಶಾಲೆಗಳ ಸ್ಥಿತಿಗತಿ ಶೋಚನೀಯವಾಗಿರುವುದು ಕಂಡು ಬಂದಿದೆ. ಎಲ್ಲಿ ದುರಸ್ಥಿ ಸಾಧ್ಯವೋ ಅಲ್ಲಿ ದುರಸ್ಥಿ ಕೈಗೊಳ್ಳಿ. ತೀರ ಅನಿವಾರ್ಯ ಎನ್ನಿಸಿದರೆ ಬಾಡಿಗೆ ಪಡೆಯಿರಿ. ಮಕ್ಕಳಿಗೆ ಯಾವುದೇ ಅಪಾಯ ಆಗಬಾರದು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಶಾಲೆಗಳ ಸಮೀಕ್ಷೆ ಕೈಗೊಂಡು ವರದಿ ನೀಡಿ ಎಂದರು.

ಜಿಪಂ ಸಿಒ ರಿಷಿ ಆನಂದ ಪ್ರತಿಕ್ರಿಯಿಸುತ್ತಾ, ಈಗಾಗಲೇ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದರು.
ತಿಂಗಳೊಳಗೆ ವರದಿ ನೀಡಿ. ಅಂಗನಾವಡಿ, ಪದವಿ ಪೂರ್ವ ಕಾಲೇಜ್‌ಗಳ ಕಟ್ಟಡಗಳ ಪರಿಶೀಲನೆ ಕೂಡ ಆಗಲಿ. ರಿಪೇರಿಗೆ ಯೋಗ್ಯ ಇಲ್ಲದ ಕಟ್ಟಡಗಳನ್ನು ತೆರವುಗೊಳಿಸಿ. ಮಕ್ಕಳಿಗೆ ಏನಾದರೂ ಆದರೆ ಸುಮ್ಮನಿರಲ್ಲ ಎಂದರು.

ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ರಾಠೋಡ, ಪ್ರಕಾಶ ಹುಕ್ಕೇರಿ, ಶಾಸಕರಾದ ವಿಠಲ ಕಟಕದೊಂಡ, ರಾಜುಗೌಡ ಪಾಟೀಲ ಕುದರಿಸಾಲೋಡಗಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸಂಟ್ ಡಿಸೋಜಾ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಪಂ ಸಿಇಒ ರಿಷಿ ಆನಂದ ಮತ್ತಿತರರಿದ್ದರು.