ಮಂಡ್ಯ: ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ತುರ್ತಾಗಿ ಮಾಡಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾವೇರಿ ನೀರಾವರಿ ನಿಗಮ ಹಾಗೂ ಹೇಮಾವತಿ ನೀರಾವರಿ ನಿಗಮದ ಅಧಿಕಾರಿಗಳು ಸುಮ್ಮನೆ ಕಾಲಹರಣ ಮಾಡದೇ ಮತ್ತು ಸಬೂಬೂ ಹೇಳದೇ ಕೆರೆಗಳಿಗೆ ನೀರು ತುಂಬಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷೃ ಮಾಡುವುದು ಬೇಡ ಎಂದು ಎಚ್ಚರಿಕೆ ನೀಡಿದರು.
ಸಭೆಯ ಪ್ರಾರಂಭದಲ್ಲಿಯೇ ಕೆರೆಗಳಿಗೆ ನೀರು ತುಂಬದಿರುವ ವಿಚಾರದ ಬಗ್ಗೆ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹಾಗೂ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪ್ರಸ್ತಾಪಿಸಿದರಲ್ಲದೆ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಮಳವಳ್ಳಿ ಹಾಗೂ ಕೆ.ಎಂ.ದೊಡ್ಡಿ ಭಾಗದ ಕೆರೆಗಳಿಗೆ ನೀರು ಬಂದಿಲ್ಲ. ಈಗ ಬಿಟ್ಟರೂ ತುಂಬುವುದು ಅನುಮಾನ. ಹೀಗಾದರೆ ಜನರಿಗೆ ಉತ್ತರ ಕೊಡುವುದಾದರೂ ಹೇಗೆ ಎಂದು ತರಾಟೆಗೆ ತೆಗೆದುಕೊಂಡರು. ಇಂತಹ ನಿರ್ಲಕ್ಷೃ ಮುಂದುವರೆದರೆ ರೈತರೊಂದಿಗೆ ಸೇರಿ ಪ್ರತಿಭಟನೆ ಮಾಡಬೇಕಾಗುತ್ತದೆ. ಈ ವಿಚಾರದಲ್ಲಿ ಅಧಿಕಾರಿಗಳ ವರ್ತನೆ ಸಹಿಸಲು ಆಗುವುದಿಲ್ಲ ಎಂದು ಪಿ.ಎಂ.ನರೇಂದ್ರಸ್ವಾಮಿ ಎಚ್ಚರಿಕೆ ನೀಡಿದರು.
ಚಲುವರಾಯಸ್ವಾಮಿ ಮಾತನಾಡಿ, ಈ ಬಾರಿ ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗಿಲ್ಲ. ಆದ್ದರಿಂದ ಕೆಆರ್‌ಎಸ್‌ನಲ್ಲಿರುವ ನೀರನ್ನೇ ಒಟ್ಲು ಜತೆಗೆ ಬೆಳೆಗೂ ಕೊಡಬೇಕು. ಆದ್ದರಿಂದ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಡಬೇಕು. ಆದಾಗ್ಯೂ ಇನ್ನೂ ನಾಲ್ಕು ತಿಂಗಳು ನಾಲೆಯಲ್ಲಿ ನೀರನ್ನು ನಿರಂತರವಾಗಿ ಹರಿಸಲಾಗುವುದು. ಅಂತೆಯೇ ಕೃಷಿ ಇಲಾಖೆಯಿಂದ ಬಿತ್ತನೆ ಬೀಜ, ರಸಗೊಬ್ಬರವನ್ನು ಸರಿಯಾಗಿ ಪೂರೈಕೆ ಮಾಡಬೇಕು ಎಂದು ಸೂಚನೆ ನೀಡಿದರು.
ರೈತರ ಆತ್ಮಹತ್ಯೆ ಪ್ರಕರಣಗಳ ವಿಚಾರ ಸಭೆಯಲ್ಲಿ ಪ್ರಸ್ತಾಪವಾದಾಗ, ರೈತರ ಆತ್ಮಹತ್ಯೆಗಳಾದರೆ ಅಧಿಕಾರಿಗಳೇ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕು. ರೈತನ ಕುಟುಂಬದವರೇ ಬಂದು ಅರ್ಜಿ ಕೊಡಲಿ ಎಂದು ಕಾಯಬಾರದು. ರಜೆ ನೆಪ ಹೇಳಿ ರೈತರ ಮನೆ ಭೇಟಿಯಿಂದಲೂ ದೂರ ಉಳಿಯಬಾರದು. ವಿಎ, ಆರ್‌ಐ ಮೂಲಕ ಮಾಹಿತಿ ಪಡೆದುಕೊಳ್ಳಬೇಕು ಎಂದು ಸೂಚಿಸಿದ ಚಲುವರಾಯಸ್ವಾಮಿ, ಈಗಲೂ ಎಷ್ಟೋ ರೈತರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ರೈತರಿಗೆ ಮಾಹಿತಿ ಕೊಡಿ. ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಅಧಿಕಾರಿಗಳು ಸ್ವಲ್ಪ ಉದಾರತೆ ಪ್ರದರ್ಶಿಸಿ. ರೈತನ ಸಾವಿನಿಂದ ಮೊದಲೇ ಕುಟುಂಬದವರು ನೋವಿನಲ್ಲಿರುತ್ತಾರೆ. ಅವರನ್ನು ಅಲೆದಾಡಿಸಿ ಇನ್ನಷ್ಟು ನೋವು, ತೊಂದರೆ ಕೊಡಬೇಡಿ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕ ಎಚ್.ಟಿ.ಮಂಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿ.ಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಮುಡಾ ಅಧ್ಯಕ್ಷ ನಯೀಂ ಇತರರಿದ್ದರು.
ಕಲುಷಿತಗೊಳಿಸುವವರ ವಿರುದ್ಧ ಕ್ರಮವಾಗಲಿ
ಪಿ.ಎಂ.ನರೇಂದ್ರಸ್ವಾಮಿ ಕಾವೇರಿ ನೀರು ಕಲುಷಿತವಾಗುತ್ತಿರುವ ಬಗ್ಗೆ ಗಂಭೀರ ಚರ್ಚೆ ನಡೆಸಿದರು. ಕೆಆರ್‌ಎಸ್ ಭಾಗದಲ್ಲಿ ಅನಧಿಕೃತವಾಗಿ ರೆಸಾರ್ಟ್‌ಗಳು ತಲೆ ಎತ್ತುತ್ತಿವೆ. ಇನ್ನೊಂದೆಡೆ ಕೆಮಿಕಲ್ ಕಾರ್ಖಾನೆಯಿಂದ ಕೊಳಚೆ ನೀರನ್ನು ಕಾವೇರಿ ನದಿಗೆ ಹರಿಸಲಾಗುತ್ತಿದೆ. ಇದು ಮನುಷ್ಯನ ಕಿಡ್ನಿಯನ್ನು ಹಾಳು ಮಾಡುತ್ತಿದೆ. ಇದರ ಬಗ್ಗೆ ಗಂಭೀರ ಕ್ರಮ ಅಗತ್ಯ ಎಂದು ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಈ ಬಗ್ಗೆ ಮೈಸೂರು ಡಿಸಿ, ಮುಡಾ ಆಯುಕ್ತ ಹಾಗೂ ಮಹಾನಗರ ಪಾಲಿಗೆ ಕಮಿಷನರ್‌ಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳುವಂತೆ ಹೇಳಲಾಗಿದೆ. ಈ ಬಗ್ಗೆ ಮತ್ತೆ ಫಾಲೋಅಪ್ ಮಾಡಲಾಗುವುದು ಎಂದರು.