ಉಡುಪಿ: ಅನರ್ಹ ಬಿಪಿಎಲ್ ಕಾರ್ಡ್ ರದ್ದತಿ ಬಗ್ಗೆ ಏಕಪಯವಾಗಿ ತೀರ್ಮಾನ ತೆಗೆದುಕೊಳ್ಳಬಾರದು. ಪಡಿತರ ಚೀಟಿಗಳ ಫಲಾನುಭವಿಗಳ ದಾಖಲೆಗಳ ನೈಜತೆ ಪರಿಶೀಲನೆ ಮಾಡಿ ನಂತರವಷ್ಟೇ ಕ್ರಮ ಕೈಗೊಳ್ಳಬೇಕು. ಅಲ್ಲಿಯ ವರೆಗೆ ಫಲಾನುಭವಿಗಳಿಗೆ ಪಡಿತರ ವ್ಯವಸ್ಥೆಯನ್ನು ಯಥಾಸ್ಥಿತಿ ಮುಂದುವರಿಸಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ತೆಮಾಸಿಕ ಕೆ.ಡಿ.ಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಡ್ ರದ್ದುಗೊಳಿಸುವ ಮುನ್ನ ಸಂಬಂಧಪಟ್ಟ ಬಿಪಿಎಲ್ ಕಾರ್ಡ್ದಾರರಿಗೆ ಸ್ಪಷ್ಟನೆ ಕೋರಿ ನೋಟಿಸ್ ನೀಡಬೇಕು ಎಂದು ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿ ಆಹಾರ ನಿರೀಕ್ಷಕ ಪ್ರವೇಶ್, ತಾಲೂಕಿನಲ್ಲಿ 29670 ಬಿಪಿಎಲ್ ಕಾರ್ಡ್ಗಳಿದ್ದು, 11238 ಕಾರ್ಡ್ಗಳನ್ನು ಪರಿಶೀಲನೆ ನಡೆಸುವಂತೆ ಆಯುಕ್ತರಿಂದ ಸೂಚನೆ ಬಂದಿದೆ. ಇದರಲ್ಲಿ 508 ಮಂದಿ ಆದಾಯ ತೆರಿಗೆ ಸಲ್ಲಿಸಿರುವುದು ಪತ್ತೆಯಾಗಿದೆ. 220 ಮಂದಿ ಬಿಪಿಎಲ್ ಗೆ ಅರ್ಹರಾಗಿದ್ದು, 228 ಮಂದಿ ಮನೆ ಪರಿಶೀಲನೆ ಬಾಕಿ ಇದೆ. 18 ಕಾರ್ಡ್ಗಳನ್ನು ಎಪಿಎಲ್ಗೆ ಪರಿವರ್ತಿಸಲಾಗಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ ಮಾತನಾಡಿ, ಉಡುಪಿ ಮತ್ತು ಕಾಪು ವ್ಯಾಪ್ತಿಯಲ್ಲಿ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯ ಉಪಕೇಂದ್ರಗಳಿಗೆ ಅನುದಾನದ ಕೊರತೆ ಇದೆ. ಹೀಗಾಗಿ ತಾಪಂ ಹಾಗೂ ಜಿಪಂ ಅನುದಾನಕ್ಕೆ ಅನುಮೋದನೆ ನೀಡಬೇಕು. ಹೆರ್ಗ ಉಪಕೇಂದ್ರ ನಗರಸಭಾ ವ್ಯಾಪ್ತಿಗೆ ಒಳಪಟ್ಟಿದ್ದು, ದುರಸ್ತಿಗೆ 3 ಲಕ್ಷ ರೂ. ತುರ್ತು ಹಣದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಶಾಸಕ ಯಶ್ಪಾಲ್ ಸುವರ್ಣ ಪ್ರತಿಕ್ರಿಯಿಸಿ, ಸಿಬ್ಬಂದಿ ಕೊರತೆ ಇರುವ ಉಪಕೇಂದ್ರಗಳ ವಿವರ ಸಲ್ಲಿಸುವಂತೆ ತಿಳಿಸಿದರು. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಆ್ಯಂಬುಲೆನ್ಸ್ ಅತೀ ಅಗತ್ಯವಾಗಿದ್ದು, ಪ್ರಮುಖ ಕಂಪೆನಿಗಳ ಸಿಎಸ್ಆರ್ಡ್ ಮೂಲಕ ಅಗತ್ಯವಿರುವ ಕಡೆ ಆ್ಯಂಬುಲೆನ್ಸ್ ದೊರಕಿಸಿಕೊಡುವುದಾಗಿ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಯಲ್ಲಮ್ಮ ಮಾತನಾಡಿ, ದೊಡ್ಡಗುಡ್ಡೆ ಸರ್ಕಾರಿ ಶಾಲೆಯಲ್ಲಿ ಕಳೆದ ವರ್ಷ 12 ಮಕ್ಕಳಿದ್ದು, ಈ ಬಾರಿ ಸ್ಥಳಿಯ ದಾನಿಗಳ ನೆರವಿನಿಂದಾಗಿ ಮಕ್ಕಳಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಆದರೆ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಇದನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುವುದು ಅಗತ್ಯವಾಗಿದೆ ಎಂದರು. ಕೇಂದ್ರ ಸರ್ಕಾರದ ಪಿಎಂ ಶ್ರೀ ಯೋಜನೆಯಲ್ಲಿ ತಾಲೂಕಿಗೆ 2 ಶಾಲೆಗಳು ಮಂಜೂರಾಗಿದ್ದು, 11 ಶಾಲೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿವೇಕಾನಂದ ಗಾವ್ಕರ್ ಮಾತನಾಡಿ, ತಾಲೂಕಿನಲ್ಲಿ ಇಲಾಖೆ ಅಧೀನದಲ್ಲಿ 10 ಹಾಸ್ಟೆಲ್ ಕಾರ್ಯನಿರ್ವಹಿಸುತ್ತಿದ್ದು, 410 ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು, 379 ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಪ್ರಸಕ್ತ ಸರ್ಕಾರಿ ಹಾಸ್ಟೆಲ್ಗಳಲ್ಲಿ ಸಂಧ್ಯಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರವೇಶಾತಿ ಅವಕಾಶ ಲಭ್ಯವಿಲ್ಲ. ಜಿಲ್ಲೆಯಲ್ಲಿ ಅನೇಕ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದಾಗಿ ಸಂಧ್ಯಾ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿದ್ದು, ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ಗಳಲ್ಲಿ ಅವಕಾಶ ನೀಡುವಂತೆ ಸಭೆಯಲ್ಲಿ ರ್ನಿಣಯಕೈಗೊಂಡು ಸರ್ಕಾರಕ್ಕೆ ಕಳುಹಿಸುವಂತೆ ತಿಳಿಸಿದರು.
ಹೈನುಗಾರರಿಗೆ 14.3 ಕೋಟಿ ರೂ. ಸಬ್ಸಿಡಿ ಬಾಕಿ
ಪಶುಸಂಗೋಪನಾ ಇಲಾಖೆ ಅಧಿಕಾರಿ ಡಾ. ಪ್ರಶಾಂತ್ ಮಾತನಾಡಿ, ತಾಲೂಕಿನಲ್ಲಿ 19700 ಜಾನುವಾರುಗಳಿದ್ದು, 11 ವೈದ್ಯರ ಪೈಕಿ ಕೇವಲ 4 ಮಂದಿ ಕಾರ್ಯನಿರ್ವಹಿಸುತ್ತಿದ್ದೇವೆ. ಕಾಪುವಿನಲ್ಲಿ 1, ಉಡುಪಿಯಲ್ಲಿ 2 ಪಶು ಆ್ಯಂಬುಲೆನ್ಸ್ಗಳಿದ್ದು, ಸಿಬ್ಬಂದಿ ಕೊರತೆಯಿಂದಾಗಿ ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಕೆಎಂಎ್ನಿಂದ ಪ್ರತಿ ತಿಂಗಳು 34 ಸಾವಿರ ಲೀ. ಹಾಲು ಖರೀದಿ ಮಾಡಲಾಗುತ್ತಿದ್ದು, ಹೈನುಗಾರರಿಗೆ 7 ತಿಂಗಳ ಸಬ್ಸಿಡಿ ಹಣ 14.3 ಕೋಟಿ ರೂ. ಜಮೆ ಮಾಡಲು ಬಾಕಿ ಇದೆ ಎಂದು ಮಾಹಿತಿ ನೀಡಿದರು. ಕೃಷಿ ಅಧಿಕಾರಿ ಮಾತನಾಡಿ, ತಾಲೂಕಿನಲ್ಲಿ 3310 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಶೇ. 70ರಷ್ಟು ಕಟಾವು ನಡೆದಿದೆ. ಹಿಂಗಾರು ಬೆಳೆಯಾಗಿ 480 ಕ್ವಿಂಟಲ್ ಉದ್ದಿನ ಬೀಜ ದಾಸ್ತಾನು ಮಾಡಲಾಗಿದೆ. ಈ ಬಾರಿ ಮಳೆಗೆ 12 ಹೆಕ್ಟೇರ್ ಮಳೆ ಹಾನಿಯಾಗಿದ್ದು, ಈ ಬಗ್ಗೆ ವಿವಿರಗಳನ್ನು ಕಂದಾಯ ಇಲಾಖೆಗೆ ಸಲ್ಲಿಸಲಾಗಿದೆ ಎಂದರು.
ತಾಪಂ ಆಡಳಿತಾಧಿಕಾರಿ ರವೀಂದ್ರ, ಕಾರ್ಯನಿರ್ವಹಣಾಧಿಕಾರಿ ವಿಜಯಾ, ತಹಶೀಲ್ದಾರ್ ಗುರುರಾಜ್, ಕೆಡಿಪಿ ನಾಮನಿರ್ದೇಶಿತ ಸದಸ್ಯ ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.