ಜಿಲ್ಲೆ

ಕ್ವಾರಿ ಕೆಲಸ ತುಂಬ ಅಪಾಯಕಾರಿ

ವೀರೇಶ ಸೌದ್ರಿ

ಧಾರವಾಡ: ಕ್ವಾರಿ ಕೆಲಸ ಅಪಾಯಕಾರಿ. ಸಣ್ಣ ತಪ್ಪು ಕೂಡ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಕೆಲವು ಸರಳ ನಿಯಮಗಳನ್ನು ಪಾಲಿಸಿದರೆ, ಜಾಗರೂಕರಾಗಿದ್ದರೆ ಬಹುತೇಕ ಎಲ್ಲ ಅವಘಡಗಳನ್ನು ತಡೆಯಬಹುದು ಎಂದು ಕಾರ್ಮಿಕ ಇಲಾಖೆಯ ಉಪನಿರ್ದೇಶಕ ಅಕ್ಬರ್ ಮುಲ್ಲಾ ಹೇಳಿದರು.

ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಧಾರವಾಡ ಜಿಲ್ಲಾಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬಳ್ಳಾರಿ ಡಿಜಿಎಂಎಸ್ ಹಾಗೂ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ 1 ದಿನದ ಜಾಗೃತಿ, ಉಪನ್ಯಾಸ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರೂ ನಿಯಮಗಳನ್ನು ಪಾಲಿಸಬೇಕು. ಕ್ವಾರಿ ಸ್ಥಳಗಳ ಸುತ್ತಲೂ ತಂತಿ ಬೇಲಿ ಹಾಕಿಸಬೇಕು. ನಾಮಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಅದೇ ರೀತಿ ಅಗ್ನಿಶಾಮಕದಳ, ಆಂಬುಲೆನ್ಸ್ ಹಾಗೂ ಅಧಿಕಾರಿಗಳ ಸಂಪರ್ಕ ಸಂಖ್ಯೆ, ಅವರ ಹೆಸರು ನಾಮಲಕಗಳಲ್ಲಿ ಅಳವಡಿಸಬೇಕು ಎಂದರು.

ಗಣಿಗಾರಿಕೆ ನಡೆಸುವವರು ಪ್ರತಿ ವರ್ಷ ನವೀಕರಣ ಕಡ್ಡಾಯವಾಗಿ ಮಾಡಿಸಬೇಕು. ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದು, ಅವರಿಗೆ ನ್ಯಾಯಯುತ ಕೆಲಸದ ವಾತಾವರಣ ಒದಗಿಸುವುದು ಮತ್ತು ಮಾಲೀಕರು ಹಾಗೂ ಕಾರ್ಮಿಕರ ನಡುವೆ ಉತ್ತಮ ಸಂಬಂಧ ಕಾಪಾಡುವ ಉದ್ದೇಶಕ್ಕಾಗಿ ಸರ್ಕಾರದಿಂದ ಹಲವು ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದರು.

ಕಾರ್ಮಿಕ ಇಲಾಖೆಯ ಉಪನಿರ್ದೇಶಕಿ ಮಾರಿಕಾಂಬಾ ಮಾತನಾಡಿ, ಗಣಿಗಾರಿಕೆ ಕ್ಷೇತ್ರದಲ್ಲಿ ತೊಡಗಿರುವ ಕಾರ್ಮಿಕರು ಹಕ್ಕುಗಳನ್ನು ತಿಳಿದುಕೊಳ್ಳುವುದು ಹಾಗೂ ಸುರಕ್ಷತಾ ನಿಯಮಗಳನ್ನು ಅನುಸರಿಸುವುದು ಅವಶ್ಯಕ ಎಂದರು.

ಗಣಿ ಮತ್ತು ಭೂ ವಿಜ್ಞಾನ ಹಿರಿಯ ಅಧಿಕಾರಿ ಡಾ.ಉಮೇಶ ಬಗರಿ ಪ್ರಸ್ತಾವಿಕವಾಗಿ ಮಾತನಾಡಿದರು. ಪಟ್ಟಾ ಲ್ಯಾಂಡ್ ಕ್ವಾರಿ ಮತ್ತು ಜಲ್ಲಿ ಸ್ಟೋನ್ ಕ್ರಶರ್ ಓನರ್ಸ್‌ ಅಸೋಸಿಯೇಷನ್ ಅಧ್ಯಕ್ಷ ವಿ.ಎಸ್.ಪಾಟೀಲ, ಬಳ್ಳಾರಿ ಡಿಜಿಎಂಎಸ್ ಮೈಂಡ್ ಸೇಫ್ಟಿಯ ನಿರ್ದೇಶಕ ಯೋಹಾನ್ ಯಜುರಲ್ಲಾ, ಉಪ ನಿರ್ದೇಶಕ ದಿಪೇಂದ್ರ ಪಂಥ ವೇದಿಕೆಯಲ್ಲಿದ್ದರು.