ಜಿಲ್ಲೆ

ಕುತ್ತಿಗೆಯನ್ನೇ ಕೊಯ್ದ ಚಡ್ಡಿ ದೋಸ್ತ್​; ಲ್ಯಾಪ್​ಟಾಪ್​ ನೋಡುತ್ತಿದ್ದಂತೆ ಏನಾಯಿತು?

sspmiracle1982

ಮೈಸೂರು: ಈಗ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿರುವ ಇವರಿಬ್ಬರೂ ಐದನೇ ತರಗತಿಯಿಂದಲೂ ಸ್ನೇಹಿತರು. ಆದರೆ ಚಡ್ಡಿ ದೋಸ್ತ್​ಗಳಾಗಿದ್ದ ಇವರಲ್ಲೊಬ್ಬ ಮತ್ತೊಬ್ಬನ ಕುತ್ತಿಗೆಯನ್ನೇ ಕೊಯ್ದಿದ್ದಾನೆ. ಮೈಸೂರು ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ವರದಿಯಾಗಿದೆ.

ನಂಜನಗೂಡಿನ ತಾಂಡವಪುರದಲ್ಲಿ ಮಂಗಳವಾರ ರಾತ್ರಿ ಈ ಪ್ರಕರಣ ನಡೆದಿದ್ದು, ಇರಿತಕ್ಕೊಳಗಾಗಿರುವ ಸ್ನೇಹಿತ ಮೈಸೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲ್ಪಟ್ಟಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಇರಿತಕ್ಕೆ ಒಳಗಾಗಿರುವ ರೋಹನ್ ಮಂಗಳೂರಿನ‌ ಆಳ್ವಾಸ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಇರಿದಿರುವ ದಿಲ್​ಶಾದ್​ ಮೈಸೂರಿನ ಕಾಲೇಜೊಂದರ ಇಂಜಿನಿಯರಿಂಗ್ ವಿದ್ಯಾರ್ಥಿ.

ಪ್ರಕರಣ ನಡೆಯುತ್ತಿದ್ದಂತೆ ದಿಲ್​ಶಾದ್​ಗೆ ಸಾರ್ವಜನಿಕರಿಂದ ಧರ್ಮದೇಟು ಬಿದ್ದಿದ್ದು, ಆತನೂ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾನೆ. ಮಂಗಳವಾರ ರಾತ್ರಿ ಇಬ್ಬರೂ ಲ್ಯಾಪ್​ಟಾಪ್ ನೋಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ರಾಹುಲ್ ಕುತ್ತಿಗೆಯನ್ನು ದಿಲ್​ಶಾದ್​ ಚಾಕುವಿನಿಂದ ಕೊಯ್ದಿದ್ದಾನೆ. ಲ್ಯಾಪ್​ಟಾಪ್​ ನೋಡುತ್ತಿದ್ದಂತೆ ಏನಾಯಿತು, ಅದರಲ್ಲಿ ಏನಿತ್ತು? ಎಂಬ ಕುತೂಹಲ ಮೂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ನಂಜನಗೂಡು ಪೊಲೀಸರು ಆ ನಿಟ್ಟಿನಲ್ಲೂ ತನಿಖೆಗೆ ಮುಂದಾಗಿದ್ದಾರೆ.