ಕರೊನಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸುವಂತೆ ಭಾರತೀಯ ದಲಿತ ಪ್ಯಾಂಥರ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎ.ಸಿ.ದಾನಪ್ಪ, ಕಂಪ್ಲಿ ಪುರಸಭೆ ವ್ಯವಸ್ಥಾಪಕ ಅನಂತರಾವ್‌ಗೆ ಮನವಿ ಸಲ್ಲಿಸಿದರು. 
ಜಿಲ್ಲೆ

ಕ್ವಾರಂಟೈನ್ ವ್ಯಕ್ತಿಗಳ ಮೇಲೆ ನಿಗಾವಹಿಸುವಂತೆ ಭಾರತೀಯ ದಲಿತ ಪ್ಯಾಂಥರ್ ಆಗ್ರಹ

ಕಂಪ್ಲಿ: ಕ್ವಾರಂಟೈನ್‌ಗೊಳಪಟ್ಟ ವ್ಯಕ್ತಿಗಳು ಕೈಗೆ ಹಾಕಿದ ಸೀಲ್‌ನ್ನು ಮರೆಮಾಚಿ ಹೇರ್ ಕಟಿಂಗ್ ಸಲೂನ್‌ಗಳಿಗೆ ತೆರಳುತ್ತಿದ್ದು, ಇಂತಹವರ ವಿರುದ್ಧ ಕ್ರಮಕೈಗೊಳ್ಳಲು ಪುರಸಭೆ ಆಡಳಿತ ಮುಂದಾಗಬೇಕು ಎಂದು ಭಾರತೀಯ ದಲಿತ ಪ್ಯಾಂಥರ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎ.ಸಿ.ದಾನಪ್ಪ ಆಗ್ರಹಿಸಿದರು.

ಇಲ್ಲಿನ ಪುರಸಭೆ ವ್ಯವಸ್ಥಾಪಕ ಅನಂತರಾವ್‌ಗೆ ಬುಧವಾರ ಮನವಿ ಸಲ್ಲಿಸಿ, ಸಲೂನ್‌ನಲ್ಲಿ ಕ್ಷೌರಿಕರು ಮಾಸ್ಕ ಧರಿಸದೆ, ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಈ ಕುರಿತು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಪೌರ ಕಾರ್ಮಿಕರು ಕರೊನಾ ಸೇನಾನಿಗಳಾಗಿ ಸೇವೆ ಸಲ್ಲಿಸುತ್ತಿದ್ದು, ಕರ್ತವ್ಯದ ಅವಧಿಯಲ್ಲಿ ಕರೊನಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಪುರಸಭೆ ಅಧಿಕಾರಿಗಳು ಸೂಚಿಸಬೇಕು. ಕರೊನಾ ಸೇನಾನಿಗಳಿಗೆ ಸೂಕ್ತ ಸುರಕ್ಷಾ ಪರಿಕರಗಳನ್ನು ವಿತರಿಸಬೇಕು. ಮಾಸ್ಕ್ ಧರಿಸದ ಸಾರ್ವಜನಿಕರಿಗೆ ಬಹು ಮೊತ್ತದ ದಂಡ ವಿಧಿಸಬೇಕು. ಕರೊನಾ ನಿಯಂತ್ರಣ ಕ್ರಮಗಳನ್ನು ಜನತೆಯಲ್ಲಿ ಜಾಗೃತಿಗೊಳಿಸುವಲ್ಲಿ ಪುರಸಭೆ ಪಾತ್ರ ಮಹತ್ತರವಾಗಿದ್ದು, ಕರ್ತವ್ಯದಲ್ಲಿ ಬದ್ಧತೆ ತೋರಬೇಕು ಎಂದು ಒತ್ತಾಯಿಸಿದರು.

ದಲಿತ ಮುಖಂಡ ಜಿ.ರಾಮಣ್ಣ, ಜಿಲ್ಲಾ ಗೌರವಾಧ್ಯಕ್ಷ ಮೋಹನ್‌ಕುಮಾರ್ ದಾನಪ್ಪ, ಪದಾಧಿಕಾರಿಗಳಾದ ಜೆ.ಕಾಟಂರಾಜು, ವರ್ದಿ ಶಬ್ಬೀರ್, ಟಿ.ರಾಜೇಂದ್ರಕುಮಾರ್, ಡಿ.ಮನೋಜ್ ಕುಮಾರ್, ಸೈಯ್ಯದ್ ವಾರೀಶ್, ಪಿ.ಈರಪ್ಪ, ರಮೇಸ್, ಲೋಕೇಶ್, ಸಿ.ಡಿ.ಅನಿಲ್‌ಕುಮಾರ್, ಎಸ್.ಕೆ.ಮಲ್ಲಿಕಾರ್ಜುನ, ಮಂಜುನಾಥ, ಮಣಿಕಂಠ, ವಿ.ಗೋವಿಂದರಾಜ್, ವಸ್ತ್ರದ ಜಡೆಯ್ಯಸ್ವಾಮಿ ಇತರರಿದ್ದರು.