ಜಿಲ್ಲೆ

ವಿದೇಶದಿಂದ ಬಂದ ಗರ್ಭಿಣಿಯರಿಗೆ ಕ್ವಾರಂಟೈನ್ ಸಡಿಲ

Dakshina Kannada

ಮಂಗಳೂರು: ವಿದೇಶಗಳಿಂದ ಆಗಮಿಸುವ ಅನಿವಾಸಿ ಭಾರತೀಯರ ಪೈಕಿ ಗರ್ಭಿಣಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, 80 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು, ಕ್ಯಾನ್ಸರ್ ಸೇರಿದಂತೆ ಕೆಲವು ರೋಗಗಳಿಂದ ಬಳಲುತ್ತಿರುವವರಿಗೆ ರಾಜ್ಯ ಸರ್ಕಾರ ಕ್ವಾರಂಟೈನ್ ನಿಯಮ ಸಡಿಲಿಕೆ ಮಾಡಿದೆ ಎಂದು ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಬದಲಾದ ನಿಯಮದಂತೆ ಅವರಿಗೆ ಕೋವಿಡ್ ಟೆಸ್ಟ್ ನಡೆಸಿದಾಗ ವರದಿ ನೆಗೆಟಿವ್ ಬಂದರೆ ಮನೆಯಲ್ಲೇ ನಿಗಾವಣೆಯಲ್ಲಿರಲು ಅವಕಾಶ ನೀಡಲಾಗುವುದು ಎಂದರು. ಮಂಗಳೂರಿಗೆ ಮೇ 12ರಂದು ರಾತ್ರಿ 179 ಪ್ರಯಾಣಿಕರೊಂದಿಗೆ ಯುಎಇನಿಂದ ಮೊದಲ ವಿಮಾನ ಬಂದಿತ್ತು. ವಿದೇಶದ ವಿಮಾನ ಲ್ಯಾಂಡ್ ಆದ ಬಳಿಕ ಪ್ರಯಾಣಿಕರು ಹೊರಗಡೆ ಬರಲು ಸಾಮಾನ್ಯವಾಗಿ 2 ಗಂಟೆ ಬೇಕು. ಆದರೆ, ಮೇ 12ರಂದು ಬಂದಿರುವುದು ಕರೊನಾ ವಿಶೇಷ ವಿಮಾನವಾದ್ದರಿಂದ ಎಲ್ಲರ ಆರೋಗ್ಯ ತಪಾಸಣೆ, ಇಮಿಗ್ರೇಷನ್ ಸೇರಿದಂತೆ ಎಲ್ಲ ರೀತಿಯ ಪರಿಶೀಲನೆ ನಡೆಸಲು ಸಮಯ ಹೆಚ್ಚು ಬೇಕಾಗುತ್ತದೆ. ತಲಾ 20 ಪ್ರಯಾಣಿಕರನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ವಿಮಾನದಿಂದ ಕೆಳಗಿಳಿಸಿ ತಪಾಸಣೆ ನಡೆಸಲಾಗುತ್ತದೆ. ಹೀಗಾಗಿ ಸಮಯ ಹೆಚ್ಚಾಗಿದೆ. ಆ ವೇಳೆ ಆಹಾರ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದರು.

ಸರ್ಕಾರದ ನಿಯಮದ ಪ್ರಕಾರ ಕ್ರಮ ಕೈಗೊಂಡಿದ್ದೇವೆ, ದುಬೈನಿಂದ ಬಂದ ಪ್ರಯಾಣಿಕರು ಅವರಾಗಿಯೇ ಹೋಟೆಲ್‌ಗಳನ್ನು ಆಯ್ಕೆ ಮಾಡಿದ್ದಾರೆ, ಹೋಟೆಲ್ ದರಗಳನ್ನು ಮೊದಲೇ ಹೇಳಿದ್ದೇವೆ ಎಂದರು. ಮಂಗಳವಾರ ಆಗಮಿಸಿದ ಮೊದಲ ವಿಮಾನದಲ್ಲಿದ್ದ ಗರ್ಭಿಣಿಯರು ಸೇರಿದಂತೆ ಎಲ್ಲರ ಆರೋಗ್ಯ ತಪಾಸಣೆ ಮಂಗಳವಾರ ರಾತ್ರಿ ನಡೆಸಲಾಗಿದೆ. ಜತೆಗೆ, ಕ್ವಾರಂಟೈನ್‌ನಲ್ಲಿರುವ ಕೇಂದ್ರಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಬುಧವಾರ ತೆರಳಿ ಗಂಟಲುದ್ರವವನ್ನು ಸಂಗ್ರಹಿಸಿದ್ದಾರೆ. ಇದರ ವರದಿ ಗುರುವಾರ ದೊರೆಯುವ ಸಾಧ್ಯತೆಯಿದೆ. ಸದ್ಯಕ್ಕೆ ಎಲ್ಲರೂ ಆರೋಗ್ಯವಾಗಿದ್ದಾರೆ ಎಂದರು.

ದ.ಕ. ಜಿಲ್ಲೆಗೆ ಆಗಮಿಸಲು ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯದಿಂದ ಇಲ್ಲಿಯವರೆಗೆ 6489 ಅರ್ಜಿ ಬಂದಿದೆ. ಯಾವುದೇ ರಾಜ್ಯಕ್ಕೆ ಜನರನ್ನು ಕಳುಹಿಸಬೇಕಾದರೆ ಆಯಾ ರಾಜ್ಯಗಳ ಒಪ್ಪಿಗೆ ಅಗತ್ಯ, ಸದ್ಯ ಜಾರ್ಖಂಡ್‌ನಿಂದ ಅನುಮತಿ ಸಿಕ್ಕಿಲ್ಲ, ಸಿಕ್ಕಿದ ಕೂಡಲೇ ಜಿಲ್ಲೆಯಲ್ಲಿರುವ ಜಾರ್ಖಂಡ್ ಕಾರ್ಮಿಕರನ್ನು ಕಳುಹಿಸಲಾಗುವುದು. ಜಿಲ್ಲೆಯಲ್ಲಿ 40,510 ಉತ್ತರ ಭಾರತದ ಕಾರ್ಮಿಕರು ಸೇವಾಸಿಂಧುವಿನಲ್ಲಿ ನೋಂದಾಯಿಸಿಕೊಂಡಿದ್ದಾರೆ. - ಸಿಂಧೂ ಬಿ.ರೂಪೇಶ್ ದ.ಕ ಜಿಲ್ಲಾಧಿಕಾರಿ