ಗಂಗಾವತಿ: ತಾಲೂಕಿನ ಹನುಮನಹಳ್ಳಿ ಗ್ರಾಮದಿಂದ ತಿರುಮಲಾಪುರದ ಕೊನೆವರೆಗೆ ಸಿಆರ್‌ಎಫ್ ಯೋಜನೆಯಡಿ 3.10 ಕೋಟಿ ರೂ. ವೆಚ್ಚದ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಶಾಸಕ ಜಿ.ಜನಾರ್ದನರೆಡ್ಡಿ, ಸಂಸದ ರಾಜಶೇಖರ ಹಿಟ್ನಾಳ ಜಂಟಿಯಾಗಿ ಶನಿವಾರ ಹನುಮನಹಳ್ಳಿ ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿದರು.
ಶಾಸಕ ಜಿ.ಜನಾರ್ದನರೆಡ್ಡಿ ಮಾತನಾಡಿ, ಅಂಜನಾದ್ರಿ ಭಾಗಕ್ಕೆ ಅಧಿಕ ಪ್ರವಾಸಿಗರು, ಭಕ್ತರು ಭೇಟಿ ನೀಡುತ್ತಿದ್ದು, ಗಂಗಾವತಿ-ಹುಲಗಿ ರಸ್ತೆ ಅಭಿವೃದ್ಧಿ ಹೊಂದಬೇಕಿದೆ. ಇದರ ಭಾಗವಾಗಿ ಸದ್ಯ ಸಾಯಿನಗರದಿಂದ ಕಡೆಬಾಗಿಲು ಕ್ರಾಸ್‌ವರೆಗಿನ ರಸ್ತೆ ನವೀಕರಣಕ್ಕೆ ಚಾಲನೆ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಈಗ ಜಂಗ್ಲಿ ಕ್ರಾಸ್ ಬಳಿಯಿಂದ ತಿರುಮಲಾಪುರ ಗ್ರಾಮದ ಕೊನೆವರೆಗೆ ರಸ್ತೆ ಮರು ಡಾಂಬರಿಕರಣ ಮಾಡಲಿದ್ದು, ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಧಾರ್ಮಿಕ ಕೇಂದ್ರಗಳಿಗೆ ಬರುವ ಭಕ್ತರಿಗೆ ಸಂಚಾರ ಸುಗಮವಾಗಲಿ ಎಂಬ ಹಿತದೃಷ್ಟಿಯಿಂದ ರಸ್ತೆ ಬದಿ ಮರ ತೆರೆವುಗೊಳಿಸುವಿಕೆ, ಸಂಚಾರ ಚಿಹ್ನೆ, ಸೂಚನಾ ಫಲಕ ಅಳವಡಿಕೆ ಹಾಗೂ ರಸ್ತೆ ಡಾಂಬರೀಕರಣ ಮಾಡಲಾಗುತ್ತದೆ ಎಂದರು.
ಮಲ್ಲಾಪುರ ಗ್ರಾಪಂ ಸದಸ್ಯ ಧನಂಜಯ, ಆನೆಗೊಂದಿ ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ಸ್ವಾಮಿ, ರಾಜಶೇಖರ, ಬಿಜೆಪಿ ಮುಖಂಡರಾದ ಮನೋಹರಗೌಡ ಹೇರೂರು, ಡಿ.ಕೆ ಆಗೋಲಿ, ವೀರೇಶ ಬಲಕುಂದಿ, ಮಂಜುನಾಥ ಕಲಾಲ್, ವೀರೇಶ ಹನುಮನಹಳ್ಳಿ ಇತರರಿದ್ದರು.