ಜಿಲ್ಲೆ

ಗ್ರಾಹಕರಲ್ಲಿ ಗುಣಮಟ್ಟ ಪ್ರಜ್ಞೆ ಅವಶ್ಯ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಿತ್ಯ ಜೀವನದಲ್ಲಿ ವಿವಿಧ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಲ್ಲಿ ಗುಣಮಟ್ಟ ಪ್ರಜ್ಞೆ ಅತಿ ಅವಶ್ಯಕ ಎಂದು ದಕ್ಷಿಣ ಗೋವಾ ಜಿಲ್ಲಾಧಿಕಾರಿ ಅಸ್ವಿನ್ ಚಂದ್ರು ಎ. ಹೇಳಿದರು.

ಭಾರತೀಯ ಮಾನಕ ಸಂಸ್ಥೆ (ಬಿಐಎಸ್)ಯ ಹುಬ್ಬಳ್ಳಿ ಶಾಖಾ ಕಚೇರಿಯು ದಕ್ಷಿಣ ಗೋವಾದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಮಾನಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿರ್ದೇಶಿತ ಮಾನದಂಡಗಳು ಗುಣಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಬೆಲೆಬಾಳುವ ಆಭರಣಗಳ ಗುಣಮಟ್ಟವನ್ನು ಖಾತರಿ ಪಡಿಸುವ ಹಾಲ್​ವಾರ್ಕ್ ಬಗ್ಗೆಯೂ ಗ್ರಾಹಕರು ತಿಳಿವಳಿಕೆ ಹೊಂದಿರಬೇಕು ಎಂದರು.

ಬಿಐಎಸ್ ಹುಬ್ಬಳ್ಳಿ ಶಾಖೆಯ ನಿರ್ದೇಶಕ ಡಿ.ಪಿ. ಕುಮಾರ ಮಾತನಾಡಿ, ಸಮಾಜದ ಒಳಿತಿಗಾಗಿ ರೂಪಿಸಲಾದ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ಬಿಐಎಸ್ ಅಗತ್ಯ ಮಾನದಂಡಗಳನ್ನು ಹೊರತಂದಿದೆ. ಜನರ ಜೀವನವನ್ನು ಉತ್ತಮ, ಸುರಕ್ಷಿತ ಮತ್ತು ಸಲಭಗೊಳಿಸುವ 2030ರ ದೃಷ್ಟಿಕೋನವನ್ನು ಜಾರಿಗೊಳಿಸಲು ಪ್ರಮಾಣಿತ ರಾಷ್ಟ್ರೀಯ ಕ್ರಿಯಾ ಯೋಜನೆ (ಎಸ್​ಎನ್​ಎಪಿ) ರೂಪಿಸಲಾಗಿದೆ. ಇದರನ್ವಯ ಸ್ಮಾರ್ಟ್ ಲೈಟಿಂಗ್, ಇವಿ ಚಾರ್ಜಿಂಗ್ ಮೂಲಸೌಕರ್ಯ, ಇ-ಕಾಮರ್ಸ್, ಹಣಕಾಸು ಸೇವೆಗಳು, ಸರಕು ಸಾಗಣೆ ಮತ್ತು ಲಾಜಿಸ್ಟಿಕ್ಸ್ ಸೇವೆಗಳು, ವೈದ್ಯಕೀಯ ಉಪಕರಣಗಳು, ಇತ್ಯಾದಿ ಕ್ಷೇತ್ರಗಳನ್ನು ಗುಣಮಟ್ಟ ಪ್ರಮಾಣೀಕರಣಕ್ಕೆ ಆದ್ಯತಾ ವಲಯಗಳೆಂದು ಗುರುತಿಸಲಾಗಿದೆ ಎಂದು ತಿಳಿಸಿದರು.

ಗೋವಾ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್​ನ ಡಾ. ದಿವ್ಯಾ ಸಿಂಘಾಲ, ಅಜಯ ಗ್ರಾಮೋಪಾಧ್ಯೆ, ಪ್ರಿಯೇಶ ಜೋಶಿ, ಮೊಹಮ್ಮದ್ ಬಿಜಾಪುರ, ಸೌವಿಕ್ ಸಿಕ್ದರ್, ಆಶುತೋಷ ಅಗರ್ವಾಲ್, ಇತರರು ಇದ್ದರು. ಬಿಐಎಸ್ ವಿಜ್ಞಾನಿ ಮರ್ಸಿ ರಾಣಿ ವಂದಿಸಿದರು.