ಮೇಲುಕೋಟೆ: ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವುದರಿಂದ ಪಾಲಕರಿಗೆ ಲಕ್ಷಾಂತರ ರೂ.ಉಳಿತಾಯವಾಗುವ ಜತೆಗೆ ಗುಣಾತ್ಮಕ ಶಿಕ್ಷಣ ದೊರೆಯುತ್ತದೆ ಎಂದು ಸಮಾಜ ಸೇವಕ ರಂಗರಾಜನ್ ಅಭಿಪ್ರಾಯಪಟ್ಟರು.
ಇಲ್ಲಿನ ಶತಮಾನದ ಸರ್ಕಾರಿ ಬಾಲಕರ ಶಾಲೆಗೆ ಬೆಂಗಳೂರು ಮಾವಳ್ಳಿಯ ಸೌಜನ್ಯ ಸೇವಾಶ್ರಮದಿಂದ ನೀಡಿರುವ ಬ್ಯಾಂಡ್‌ಸೆಟ್, ಕಂಪ್ಯೂಟರ್, ಬ್ಯಾಗ್, ನೋಟ್‌ಪುಸ್ತಕ, ಕ್ರೀಡಾ ಸಾಮಗ್ರಿಗಳನ್ನು ಹಸ್ತಾಂತರಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರಿದ್ದಾರೆ. ಕ್ರೀಡೆ ಸೇರಿದಂತೆ ಎಲ್ಲ ಸಹಪಠ್ಯ ಚಟುವಟಿಕೆಗೆ ಪ್ರೋತ್ಸಾಹಕ ವಾತಾವರಣವಿದೆ. ಶಾಲೆಗಳಲ್ಲಿ ಬಿಸಿಯೂಟ, ಕ್ಷೀರಭಾಗ್ಯ ಸೇರಿದಂತೆ ಹಲವು ಯೋಜನೆಗಳ ಮೂಲಕ ಪೌಷ್ಟಿಕಾಂಶಯುಕ್ತ ಆಹಾರ ನೀಡುತ್ತಿದ್ದು, ಭೌತಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಉತ್ಸಾಹಿ ಶಿಕ್ಷಕರ ಕೋರಿಕೆಗೆ ಸ್ಪಂದಿಸಿ ನಮ್ಮಂತಹ ದಾನಿಗಳು, ಹಿರಿಯ ವಿದ್ಯಾರ್ಥಿಗಳು ಕೈಜೋಡಿಸಿದರೆ ಸರ್ಕಾರಿ ಶಾಲೆಗಳನ್ನು ಮಾದರಿಯನ್ನಾಗಿ ಮಾಡಬಹುದು. ಶಿಕ್ಷಕರ ಕೊರತೆಯಿದ್ದರೆ ಸ್ಥಳೀಯ ಪ್ರತಿಭಾವಂತರನ್ನು ಸ್ವಯಂಸೇವಕ ಶಿಕ್ಷಕರನ್ನಾಗಿ ಬಳಸಿಕೊಳ್ಳಬಹುದು. ಖಾಸಗಿ ಶಾಲೆಯ ವ್ಯಾಮೋಹಕ್ಕೆ ಬಲಿಯಾಗಿ ಪಾಲಕರು ಹಣ ಕಳೆದುಕೊಳ್ಳುವ ಬದಲು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.
ಸೌಜನ್ಯ ಸೇವಾಶ್ರಮ ಹಲವಾರು ಸರ್ಕಾರಿ ಶಾಲೆಗಳಿಗೆ ಸಹಕಾರ ನೀಡುತ್ತಿದೆ. ಕೊಡಗು ಜಿಲ್ಲೆಯ ಕೊಪ್ಪ ಎಂಬ ಗ್ರಾಮದಲ್ಲಿ ಶಿಕ್ಷಕಿಯೊಬ್ಬರು ಐದು ವಿದ್ಯಾರ್ಥಿಗಳಿದ್ದ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದರಿಂದ ಇಂದು 280 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಪ್ರವೇಶಕ್ಕೆ ಪೈಪೋಟಿ ನಡೆಸುವಂತಾಗಿದೆ. ಸರ್ಕಾರಿ ಶಾಲೆಗಳಲ್ಲಿ ಇಂತಹ ಬೆಳವಣಿಗೆ ತರಲು ಪಾಲಕರು ಮನಸ್ಸು ಮಾಡಬೇಕು ಎಂದರು.
ಉದ್ಯಮಿ ಪುರಿ ಜಗನ್ನಾಥ್ ಮಾತನಾಡಿ, ಇಲ್ಲಿನ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಜಿಲ್ಲೆಯಲ್ಲೇ ಮಾದರಿ ಶಾಲೆಯಾಗಬೇಕು. ಅಗತ್ಯವಾದ ಸೌಲಭ್ಯ ನೀಡುತ್ತೇವೆ ಎಂದು ಭರವಸೆ ನೀಡಿದರು.
ಬಿಆರ್‌ಸಿಯ ಐಆರ್‌ಟಿ ರಾಜೇಗೌಡ ಮಾತನಾಡಿ, ಮುಖ್ಯಶಿಕ್ಷಕ ಸಂತಾನರಾಮನ್ ಅವರು ಮುಚ್ಚುತ್ತಿದ್ದ ಶತಮಾನದ ಶಾಲೆಯನ್ನು ಪರಿಶ್ರಮದಿಂದ ಉಳಿಸಿಕೊಂಡು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಶಾಲಾಭಿವೃದ್ಧಿಗೆ ಸಮದಾಯದ ಬೆಂಬಲಬೇಕಿದೆ ಎಂದರು.
ಸಿಆರ್‌ಪಿ ಬೆಟ್ಟಸ್ವಾಮಿಗೌಡ, ಸೌಜನ್ಯ ಸೇವಾಶ್ರಮದ ಟ್ರಸ್ಟಿಗಳಾದ ಶ್ರೀಸುಧಾ, ಮನೋಹರರಾವ್, ಮೀನಾಕ್ಷಿ, ಸುಂದರರಾಜ್, ಶೈಲಜಾ, ಸುರೇಶ್, ನಿರ್ಮಲಾ, ಶ್ರೀನಿವಾಸ್, ಶರ್ಮಿಳಾ, ಸೂರ್ಯಪ್ರಕಾಶ್, ಸಾವಿತ್ರಿ ಭಾಗವಹಿಸಿದ್ದರು. ಮುಖ್ಯಶಿಕ್ಷಕ ಸಂತಾನರಾಮನ್, ಶಿಕ್ಷಕರಾದ ಮಹಾಲಕ್ಷ್ಮೀ, ಬಿ.ಜಯಂತಿ, ಜೆ.ಬಿ.ಶ್ರುತಿ, ಮಹಮದ್ ಇಮ್ರಾನ್, ಗಿರಿಜಾ, ಅಡುಗೆ ಸಿಬ್ಬಂದಿ ಕಮಲಾ, ಜಯಲಕ್ಷ್ಮೀ ಅವರನ್ನು ಅಭಿನಂದಿಸಲಾಯಿತು.