ಮೈಸೂರು: ಬೆಟ್ಟದ ತಾಯಿ ಶ್ರೀ ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ದರ್ಶನ ಸುಲಲಿತವಾಗಿ ದೊರೆಯುವಂತೆ ಮಾಡಲು ನೂತನವಾಗಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ.
ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ತರುವ ಉದ್ದೇಶಕೋಸ್ಕರ 50 ಲಕ್ಷ ರೂ. ಅನುದಾನವನ್ನು ಕಾಯ್ದಿರಿಸಲಾಗಿದೆ. ಸ್ಮಾರ್ಟ್ ಕಾರ್ಡ್ ಪಡೆದವರು ಇನ್ನು ಮುಂದೆ ಸುಲಭವಾಗಿ ದೇವರ ದರ್ಶನ ಪಡೆಯಬಹುದು. ಹೊರಗಿನಿಂದ ಬರುವ ಭಕ್ತಾದಿಗಳು ಹಾಗೂ ವಿಐಪಿಗಳಿಗೆ ಈ ನೂತನ ವ್ಯವಸ್ಥೆಯ ಹೆಚ್ಚು ಅನುಕೂಲವಾಗಲಿದೆ. ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ. ಆದರೆ, ಬಡ ಹಾಗೂ ಮಧ್ಯಮ ವರ್ಗದವರಿಗೆ ಮಾತ್ರ ಈ ವ್ಯವಸ್ಥೆ ಕೈಗೆಟುಕಲು ಸಾಧ್ಯವಿಲ್ಲ.
ಒಟ್ಟು 4 ರೀತಿಯ ಸ್ಮಾರ್ಟ್ ಕಾರ್ಡ್‌ಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. 12 ಸಾವಿರ ರೂ. ಸ್ಮಾರ್ಟ್ ಕಾರ್ಡ್ ಪಡೆದರೆ ಒಬ್ಬರಿಗೆ ವರ್ಷಕ್ಕೆ 12 ಬಾರಿ ದರ್ಶನಕ್ಕೆ ಅವಕಾಶ ನೀಡಲಾಗುವುದು. ಜತೆಗೆ ಪ್ರತಿ ಭೇಟಿಗೆ 1ಲಾಡು ಪ್ರಸಾದ ದೊರೆಯಲಿದೆ. 25ಸಾವಿರ ರೂ.ಸ್ಮಾರ್ಟ್ ಕಾರ್ಡ್ ಇಬ್ಬರಿಗೆ ವಾರ್ಷಿಕ 12 ಬಾರಿ ದರ್ಶನಕ್ಕೆ ಅವಕಾಶ ಹಾಗೂ ಪ್ರತಿ ಭೇಟಿಗೆ 2 ಲಾಡುಪ್ರಸಾದ, 50 ಸಾವಿರ ಸ್ಮಾರ್ಟ್ ಕಾರ್ಡ್‌ಗೆ ಐವರಿಗೆ ವರ್ಷಕ್ಕೆ 1ಬಾರಿ ದರ್ಶನ, ಪ್ರತಿ ಭೇಟಿಗೆ ಐದು ಲಾಡು ಮತ್ತು ಪಂಚಾಮೃತ ಪ್ರಸಾದ, 1 ಲಕ್ಷ ರೂ.ಸ್ಮಾರ್ಟ್ ಕಾರ್ಡ್‌ಗೆ ವರ್ಷಕ್ಕೆ ಗರಿಷ್ಠ ಹತ್ತು ಮಂದಿಗೆ 12 ಬಾರಿ ದರ್ಶನ, ಪ್ರತಿ ಭೇಟಿಗೆ 10 ಲಾಡು, ವಿಶೇಷ ಪ್ರಸಾದ ವಿತರಿಸಲು ಉದ್ದೇಶಿಸಲಾಗಿದೆ.
ಹೆಚ್ಚುತ್ತಿರುವ ಆದಾಯ: ದೇವಾಲಯದ ಆದಾಯ ಪ್ರತಿ ವರ್ಷ ಏರಿಕೆ ಕಾಣುತ್ತಿದೆ. 2020-21ರಲ್ಲಿ 14.81 ಕೋಟಿ ರೂ. 2021-22ರಲ್ಲಿ 21.91 ಕೋಟಿ ರೂ, 2022-23ರಲ್ಲಿ 45.50 ಕೋಟಿ ರೂ., 2023-24ರಲ್ಲಿ 49.64 ಕೋಟಿ ರೂ. 2024-25ರ ಜನವರಿ ತಿಂಗಳಿಂದ ಆಗಸ್ಟ್ 31ರವರಗೆ 17 ಕೋಟಿ ರೂ.ಬಂದಿದೆ. ಅದೇ ರೀತಿ 2020-21ರಲ್ಲಿ 3.45 ಕೋಟಿ ರೂ.ಖರ್ಚು, 2021-22ರಲ್ಲಿ 80.75 ಲಕ್ಷ ರೂ.ಖರ್ಚು, 2022-23ರಲ್ಲಿ 12.74 ಲಕ್ಷ ರೂ, 2023-24ರಲ್ಲಿ 28.18 ಕೋಟಿ ರೂ, 2024-25ರಲ್ಲಿ ಜನವರಿ ತಿಂಗಳಿಂದ ಆಗಸ್ಟ್ 31ರವರೆಗೆ 10.09 ಕೋಟಿ ರೂ.ಖರ್ಚಾಗಿದೆ.
ಭಕ್ತರ ಸೇವಾರ್ಥ ದರಗಳನ್ನು ಪರಿಷ್ಕರಣೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ದೊರೆತ್ತಿಲ್ಲ. ದಸರಾ ನಂತರ ನಡೆಯುವ ಮತ್ತೊಂದು ಸಭೆಯಲ್ಲಿ ಈ ವಿಚಾರವನ್ನು ಮಂದಿಡಲು ತೀರ್ಮಾನಿಸಲಾಗಿದೆ.
ಪ್ರಸ್ತುತ ಪಂಚಾಮೃಥ ಅಭಿಷೇಕಕ್ಕೆ 220 ರೂ. ಇದ್ದು, ಇದನ್ನು 300 ರೂ.ಗೆ ಏರಿಕೆ ಮಾಡಲು ಉದ್ದೇಶಿಸಲಾಗಿದೆ. ಅದೇ ರೀತಿ ಪಂಚಾಮೃತ ಏಕವಾರ ಅಭಿಷೇಕ ದರವನ್ನು 300 ರೂ. ನಿಂದ 500 ರೂ.ಗೆ, ಪಂಚಾಮೃಥ ಏಕದಶವಾರ ಅಭಿಷೇಕವನ್ನು 550 ರೂ. ನಿಂದ 750 ರೂ.ಗೆ, ಮಜಾಪೂಜೆ ದರವನ್ನು1100 ರೂ.ನಿಂದ 2000 ರೂ.ಗೆ, ಪ್ರಕಾರೋತ್ಸವವನ್ನು 275 ರೂ.ನಿಂದ 400 ರೂ.ಗೆ ದೊಡ್ಡ ಉತ್ಸವ ದರವನ್ನು 450 ರೂ.ನಿಂದ 600 ರೂ.ಗೆ, ಸಿಂಹವಾಹನ ಉತ್ಸವ ದರವನ್ನು 550 ರೂ.ನಿಂದ 750 ರೂ.ಗೆ, ದೊಡ್ಡ ಸಿಂಹವಾಹನ ಉತ್ಸವವನ್ನು 1650 ರೂ.ನಿಂದ 2500 ರೂ.ಗೆ, ಬೆಳ್ಳಿರಥ ಸೇವೆಯನ್ನು 2750 ರೂ.ನಿಂದ 3000 ರೂ.ಗೆ, ಚಿಕ್ಕರಥ ಎಳೆಯುವ ಸೇವೆ ದರವನ್ನು 3000 ರೂ.ನಿಂದ 4000 ರೂ.ಗೆ, ದೇವಿಗೆ ಸೀರೆ ಧರಿಸುವ ಸೇವೆಗೆ 20 ರೂ.ನಿಂದ 50 ರೂ.ಗೆ ಏರಿಕೆ ಮಾಡುವ ಉದ್ದೇಶ ಹೊಂದಲಾಗಿದೆ.
ಅದೇ ರೀತಿ ಸಪ್ತಶತಿ ಪಾರಾಯಣ 110 ರೂ.ನಿಂದ 200ರೂ., ಚಂಡಿಹೋಮ 35 ಸಾವಿರ ರೂ.ನಿಂದ 45ಸಾವಿರ ರೂ., ಸ್ಕೂಟರ್, ಆಟೋ ಪೂಜೆ ಕಾಣಿಕೆ 30 ರೂನಿಂದ 100 ರೂ., ಕಾರು, ಜೀಪ್ ಪೂಜೆ 50 ರೂ.ನಿಂದ 200 ರೂ., ಟೆಂಪೋ, ಬಸ್, ಲಾರಿ ಪೂಜೆ 100 ರೂ.ನಿಂದ 500 ರೂ., ಲಾಡು ಪ್ರಸಾದ 1ಕ್ಕೆ 15 ರೂ.ನಿಂದ 25 ರೂ., ಒಂದು ದಿನದ ಅನ್ನದಾಸೋಹ ಸೇವೆಗೆ 15 ಸಾವಿರ ರೂ.ನಿಂದ 25 ಸಾವಿರ ರೂ., ಬೈನಾಕುಲರ್ 20 ರೂ.ನಿಂದ 50 ರೂ., ಪ್ರವೇಶಗೇಟ್ ನಂಬರ್1ರಲ್ಲಿ 100 ರೂ.ನಿಂದ 200 ರೂ ಪ್ರವೇಶ ಗೇಟ್ ನಂಬರ್ 2ರಲ್ಲಿ 30 ರೂ.ನಿಂದ 50 ರೂ.ಗೆ ಏರಿಕೆ ಮಾಡಲು ಉದ್ದೇಶಿಸಲಾಗಿದೆ. ಪರಿಷ್ಕೃತ ದರಕ್ಕೆ ಒಪ್ಪಿಗೆ ದೊರೆತ ನಂತರ ಜಾರಿಯಾಗಲಿದೆ.
ಸೇವಾರ್ಥ ದರಗಳ ದರ ಪರಿಷ್ಕರಣೆ ಬಗ್ಗೆ ಪ್ರಾಧಿಕಾರದ ಸಭೆಯಲ್ಲಿ ಒಪ್ಪಿಗೆ ದೊರೆತಿಲ್ಲ. ಮುಂದಿನ ಸಭೆಗೆ ಮಂಡಿಸುವಂತೆ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿಗಳು ಹೇಳಿದ್ದಾರೆ. ಪ್ರಾಧಿಕಾರದ ಒಪ್ಪಿಗೆ ಸಿಗದ ಕಾರಣ ಹಳೆಯ ದರವೇ ಮುಂದುವರಿಯಲಿದೆ. ಭಕ್ತಾದಿಗಳ ಅನುಕೂಲಕೋಸ್ಕರ ಸ್ಮಾರ್ಟ್ ಕಾರ್ಡ್ ಜಾರಿಗೆ ತರಲು ಉದ್ದೇಶಿಸಲಾಗಿದೆ.
ಡಾ.ಎಂ.ಜೆ.ರೂಪಾ, ಕಾರ್ಯದರ್ಶಿ, ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ