ಜಿಲ್ಲೆ

ಹಣ್ಣೇಮಠದಲ್ಲಿ ಹೆಬ್ಬಾವು ಪ್ರತ್ಯಕ್ಷ

ಬಸವರಾಜ ವೀರಪ್ಪ ಗರಗ

ಕುಮಟಾ: ತಾಲೂಕಿನ ಹೊಲನಗದ್ದೆ ಪಂಚಾಯಿತಿ ವ್ಯಾಪ್ತಿಯ ಹಣ್ಣೇಮಠದಲ್ಲಿ ಸಂಕನಕೇರಿ ಗೋಪಾಲ ಪಟಗಾರ ಎಂಬುವವರ ಮನೆಯಲ್ಲಿ ಭಾನುವಾರ ಕಂಡುಬಂದ ಹೆಬ್ಬಾವನ್ನು ಉರಗ ತಜ್ಞ ಪವನ ನಾಯ್ಕ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಈ ಬಗ್ಗೆ ವಿವರಿಸಿದ ಪವನ ನಾಯ್ಕ, ಸುಮಾರು 12 ಅಡಿ ಉದ್ದ ಇರುವ ಹೆಬ್ಬಾವು ಆಹಾರ ಅರಸುತ್ತ ಜನವಸತಿ ಪ್ರದೇಶಕ್ಕೆ ಬಂದಿರಬಹುದು. ಮುಖ್ಯವಾಗಿ ಜನರಿಗೆ ಹೆಬ್ಬಾವು ಮತ್ತು ವೈಪರ್ (ಕೊಳಕು ಮಂಡಲ)ಬಗ್ಗೆ ತಿಳಿವಳಿಕೆ ಇರಬೇಕು. ಹೆಬ್ಬಾವಿನಂತೆ ಕಾಣುವ ಸುಮಾರು 6.5 ಅಡಿ ಉದ್ದ ಇರುವ ವೈಪರ್ ಅತ್ಯಂತ ಅಪಾಯಕಾರಿ ಹಾವು. ಇತ್ತೀಚೆಗೆ ಕೊಳಕು ಮಂಡಲದ ಸಂಖ್ಯೆ ಕಡಿಮೆಯಾಗುತ್ತಿದೆ. ನಾಗರ ಹಾವಿಗೆ ವೈಪರ್​ಗಳು ತುಂಬಾ ಇಷ್ಟವಾದ ಆಹಾರ, ಇದರ ಮರಿ ಮೊಟ್ಟೆಗಳನ್ನೆಲ್ಲ ತಿಂದು ಹಾಕುತ್ತಿದೆ. ಆದ್ದರಿಂದ ವೈಪರ್ ಸಂಖ್ಯೆ ಕ್ಷೀಣಿಸುತ್ತಿದೆ. ಆದರೆ, ಕರಾವಳಿ ಭಾಗದಲ್ಲಿ ಹೆಬ್ಬಾವಿನಂತೆಯೇ ವೈಪರ್ ಸಂಖ್ಯೆ ಸಾಕಷ್ಟಿದ್ದು, ಇದು ಕಚ್ಚಿದರೆ ದೇಹದ ಮಾಂಸಖಂಡಗಳು ಕೊಳೆಯುತ್ತ ಹೋಗುತ್ತದೆ, ಇದಕ್ಕೆ ಔಷಧ ಇಲ್ಲ. ಯಾವುದೇ ಹಾವು ಅದಕ್ಕೆ ಅಪಾಯ ಉಂಟಾದ ಹೊರತು ಮನುಷ್ಯನ ಮೇಲೆ ದಾಳಿ ಮಾಡುವುದಿಲ್ಲ. ಹಾವುಗಳು ಸಹ ಪರಿಸರದ ಒಂದು ಭಾಗ. ಜನರು ಹಾವುಗಳನ್ನು ಕಂಡ ತಕ್ಷಣ ಕೊಲ್ಲಬಾರದು ಎಂದು ಪವನ ನಾಯ್ಕ ಹೇಳಿದ್ದಾರೆ.