ಮಡಿಕೇರಿ:
ಕುಶಾಲನಗರ ತಾಲೂಕು ಸೀಗೆಹೊಸೂರು ಗ್ರಾಮದಲ್ಲಿ ಜಾನುವಾರುಗಳಿಗೆ ಕೊಡುವುದಕ್ಕೋಸ್ಕರ ಸಿಹಿಗೆಣಸಿನ ಬಳ್ಳಿ ಕತ್ತರಿಸುತ್ತಿದ್ದ ವೇಳೆ ಹೆಬ್ಬಾವು ಬಾಯಿಯಿಂದ ಭಾನುವಾರ ಸಂಜೆ ರೈತ ಮಹಿಳೆ ತಾರಾಕುಮಾರಿ ಸ್ವಲ್ಪದರಲ್ಲಿ ಪಾರಾಗಿದ್ದಾರೆ.
ಗೆಣಸಿನ ಬಳ್ಳಿ ಕತ್ತರಿಸುತ್ತಿದ್ದ ವೇಳೆ ಬಳ್ಳಿ ಮಧ್ಯೆ ಇದ್ದ ಹೆಬ್ಬಾವಿನ ಬಾಯಿ ಭಾಗವನ್ನು ಗೆಣಸು ಬಳ್ಳಿ ಎಂದು ಇವರು ಆಕಸ್ಮಿಕವಾಗಿ ಹಿಡಿದಿದ್ದಾರೆ. ಅಷ್ಟರಲ್ಲಿ ಅದು ಇವರ ಕೈಯಿಂದ ಜಾರಿದಾಗ ಹಾವು ಎನ್ನುವುದು ಅರಿವಿಗೆ ಬಂದಿದೆ. ಭಯದಿಂದ ಕಿರುಚಿಕೊಂಡು ಓಡಿ ಹೋಗಿ ಪತಿ ಬಸವರಾಜು ಅವರಿಗೆ ಮಾಹಿತಿ ನೀಡಿದ್ದಾರೆ.
ಬಸವರಾಜು ಸ್ಥಳಕ್ಕೆ ಬಂದು ನೋಡಿದಾಗ ಪ್ರಾಣಿಯೊಂದನ್ನು ಬೇಟೆಯಾಡಿ ಹಿಡಿದು ನುಂಗಿ ಹೊಟ್ಟೆ ಉಬ್ಬಿ ಒದ್ದಾಡುತ್ತಿದ್ದ ಸ್ಥಿತಿಯಲ್ಲಿದ್ದ ಬೃಹತ್ ಗಾತ್ರದ ಹೆಬ್ಬಾವು ಕಂಡುಬAದಿದೆ. ನಂತರ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಹೆಬ್ಬಾವು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
ಸಿಹಿಗೆಣಸು ಬಳ್ಳಿ ಸದೃಢವಾಗಿ ಹಬ್ಬಿಕೊಂಡಿರುವಲ್ಲಿ ಹಾವುಗಳ ಹಾವಳಿ ಸಾಮಾನ್ಯವಾಗಿದ್ದು, ರೈತರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.