ಜಿಲ್ಲೆ

ಪ್ಯಾಟಿ ಸಕ್ರಪ್ಪಜ್ಜೇಶ್ವರರ ಸಂಭ್ರಮದ ರಥೋತ್ಸವ

Gadag

ಗಜೇಂದ್ರಗಡ: ಸಮೀಪದ ನೆಲ್ಲೂರ ಪ್ಯಾಟಿ ಗ್ರಾಮದಲ್ಲಿ ಇಟಗಿ ಶ್ರೀ ಭೀಮಾಂಬಿಕೆಯ ಅಣ್ಣನವರಾದ ಶ್ರೀ ಧರ್ಮಗುರು ಸಕ್ರಪ್ಪಜ್ಜೇಶ್ವರರ ಜಾತ್ರಾ ಮಹೋತ್ಸವದ ನಿಮಿತ್ತ ಶುಕ್ರವಾರ ಸಂಜೆ ರಥೋತ್ಸವ ಸಡಗರ ಸಂಭ್ರಮದಿಂದ ನಡೆಯಿತು.

ಸಕ್ರಪ್ಪಜ್ಜೇಶ್ವರ ಗದ್ದುಗೆಗೆ ಬೆಳಗ್ಗೆ ಬಿಲ್ವಾರ್ಚನೆ, ಮಹಾರುದ್ರಾಭಿಷೇಕ, ಮೂರ್ತಿ ಪೂಜೆ, ಪ್ರಾರ್ಥನೆ, ಪುಷ್ಪಾರ್ಚನೆ, ಪಲ್ಲಕ್ಕಿ ಉತ್ಸವ ಮತ್ತು ಮಹಾಪ್ರಸಾದ ಕಾರ್ಯಕ್ರಮ ನಡೆಯಿತು. ಸಂಜೆ ಸೇವಂತಿಗೆ, ಮಲ್ಲಿಗೆ, ಗುಲಾಬಿ, ಕನಕಾಂಬರ ಹೀಗೆ ನಾನಾ ಬಗೆಯ ಹೂವುಗಳಿಂದ, ಬಾಳೆ ಎಲೆ, ಕಬ್ಬು, ತೆಂಗಿನ ಗರಿಗಳಿಂದ ಅಲಂಕರಿಸಿದ ರಥದಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಜಾತ್ರೆಯ ಸಾನ್ನಿಧ್ಯ ವಹಿಸಿದ್ದ ಸಕ್ರಪ್ಪಜ್ಜ ಧರ್ಮರ ಸ್ವಾಮೀಜಿ, ಅರ್ಜುನಪ್ಪಜ್ಜ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಭಕ್ತರು ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ಎಸೆದರು. ಭಕ್ತರು ಸಕ್ರಪ್ಪಜ್ಜ ಮಹಾರಾಜ ಕೀ ಜೈ, ಹರಹರ ಮಹಾದೇವ ಎನ್ನುತ್ತ ರಥಕ್ಕೆ ಭಕ್ತಿಯಿಂದ ನಮಿಸಿ, ಮುಂದೆ ಎಳೆದರು. ರಥೋತ್ಸವಕ್ಕೆ ಹಗ್ಗವನ್ನು ಮುಶಿಗೇರಿ ಗ್ರಾಮದಿಂದ, ಕಳಸ ನೆಲ್ಲೂರ ಗ್ರಾಮದಿಂದ ಮತ್ತು ಗುಳಗುಳಿ ಗ್ರಾಮದ ಭಕ್ತರಿಂದ ತೇರಿನ ಹೂವಿನ ಮಾಲೆ ತರಲಾಯಿತು. ಇದೇ ವೇಳೆ ಮುಖಂಡರಾದ ಯಲ್ಲಪ್ಪ ಕುದರಿ, ರಮೇಶ ರಾಠೋಡ, ಕೆ.ಎಸ್. ಕುದರಿ, ಕಲ್ಲಪ್ಪ ಹುಲ್ಲೂರ, ಸುರೇಶ ಮಂತಾ, ಶಂಭು ಬೆಳವಣಕಿಮಠ ಇತರರಿದ್ದರು.