ಮಂಗಳೂರು: ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರ ಬೇಜವಾಬ್ದಾರಿತನಕ್ಕೆ ಬಿಎಸ್ಸೆನ್ನೆಲ್ ನಿವೃತ್ತ ಅಧಿಕಾರಿಯೊಬ್ಬರು ಬಲಿಯಾದ ಘಟನೆ ಮಂಗಳೂರಿನ ಕದ್ರಿ ಸರ್ಕ್ಯುಟ್ ಹೌಸ್ ಬಳಿ ಭಾನುವಾರ ರಾತ್ರಿ ಸಂಭವಿಸಿದೆ.
ಮಂಗಳೂರು ಲೇಡಿಹಿಲ್ ಬಿಎಸ್‌ಎನ್‌ಎಲ್ ಸ್ಟಾಫ್ ಕ್ವಾಟ್ರಸ್ ನಿವಾಸಿ ಆನಂದ್(62) ಮೃತ ದುರ್ದೈವಿ. ಮೂಲತಃ ಚಿಕ್ಕಮಗಳೂರಿನ ಹಸಹಳ್ಳಿಪೇಟೆಯ ಗಾಳಿಪೇಟೆ ನಿವಾಸಿಯಾದ ಆನಂದ್, ಮಂಗಳೂರಿನ ಬಿಎಸ್‌ಎನ್‌ಎಲ್ ಕಚೇರಿಯ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದರು. ಇದನ್ನೂ ಓದಿರಿ ಬರ್ತ್ ಡೇ ಸಂಭ್ರಮದಲ್ಲಿದ್ದ ನಾಲ್ವರು ದುರಂತ ಸಾವು, ಕೇಕ್ ಕತ್ತರಿಸಿದ ದಿನವೇ ಅಟ್ಟಹಾಸ ಮೆರೆದ ಜವರಾಯ
ಯಾವುದೋ ಕೆಲಸದ ಮೇರೆಗೆ ಉಡುಪಿಗೆ ತೆರಳಿದ್ದ ಆನಂದ್ ಭಾನುವಾರ ರಾತ್ರಿ ವಾಪಸ್ ಮಂಗಳೂರಿಗೆ ಬಸ್ನಲ್ಲಿ ಬಂದಿದ್ದರು. ಬಸ್ ಇಳಿ ನಡೆದುಕೊಂಡು ರಸ್ತೆಬದಿ ಹೋಗುತ್ತಿದ್ದರು. ಈ ವೇಳೆ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಷಣ್ಮುಗಂ ಕುಡಿದ ಮತ್ತಿನಲ್ಲಿ ಬೇಕಾಬಿಟ್ಟಿ ಕಾರು ಚಲಾಯಿಸಿಕೊಂಡು ಬಂದು ಆನಂದ್‌ಗೆ ಡಿಕ್ಕಿ ಹೊಡೆದಿದ್ದಾರೆ.
ತೀವ್ರ ಸ್ವರೂಪದ ಗಾಯಗಳಿಂದ ಆನಂದ್ ಮೃತಪಟ್ಟಿದ್ದಾರೆ. ಪೊಲೀಸರು ಕಾರನ್ನು ನಿಲ್ಲಿಸಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಸಂಚಾರಿ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನಂದ್‌ಗೆ ಮಕ್ಕಳಿಲ್ಲ. ಪತ್ನಿ ಲಲಿತಾ ಕೂಡ ಅನಾರೋಗ್ಯಪೀಡಿತರಾಗಿದ್ದು, ಪತಿಯ ಸಾವಿನಿಂದ ಆಘಾತಕ್ಕೊಳಗಾಗಿದ್ದಾರೆ.