ನುಗ್ಗೇಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ರೈತರಿಗೆ ಪಿವಿಸಿ ಪೈಪ್‌ ವಿತರಣೆ. 
ಜಿಲ್ಲೆ

ವರ್ಷದಲ್ಲಿ 700 ರೈತರಿಗೆ ಪಿವಿಸಿ ಪೈಪ್ ವಿತರಣೆ

ನುಗ್ಗೇಹಳ್ಳಿ: ರೈತರಿಗೆ ಕೃಷಿ ನೀರಾವರಿ ಅನುಕೂಲ ಕಲ್ಪಿಸಲು ಒಂದು ವರ್ಷದಲ್ಲಿ 700 ಜನ ರೈತರಿಗೆ ರಿಯಾಯಿತಿ ದರದಲ್ಲಿ ಪಿವಿಸಿ ಪೈಪ್‌ಗಳನ್ನು ವಿತರಿಸಲಾಗಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜಿ.ವಿ.ದಿನೇಶ್ ತಿಳಿಸಿದರು.

ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಕೃಷಿ ಕಾರ್ಯಗಾರದಲ್ಲಿ ಪಿವಿಸಿ ಪೈಪ್ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಬೇಸಿಗೆಯಲ್ಲಿ ತೆಂಗು, ಅಡಕೆ, ಬಾಳೆ, ತರಕಾರಿ, ಶುಂಠಿ ಬೆಳೆಯುವ ರೈತರಿಗೆ ಹನಿ ನೀರಾವರಿ ಹಾಗೂ ಸ್ಪ್ರಿಂಕ್ಲರ್ ಅಳವಡಿಸಿಕೊಳ್ಳಲು ಗುಣಮಟ್ಟದ ಪೈಪ್‌ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.

2014 ರಿಂದ 2019 ರವರೆಗೆ ಹೋಬಳಿಯ 450 ರೈತರು ಕೃಷಿ ಭಾಗ್ಯ ಯೋಜನೆ ಪಡೆದುಕೊಂಡಿದ್ದಾರೆ. ಈ ಭಾಗದಲ್ಲಿ ಕೃಷಿ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು 3500 ರೈತರಿಗೆ ತುಂತುರು ನೀರಾವರಿ ಪೈಪ್‌ಗಳನ್ನು ಕೊಡಿಸಲಾಗಿದೆ. 1 ಎಕರೆ ಭೂಮಿ ಹೊಂದಿದ ರೈತರು 2500 ವಂತಿಕೆ ಹಣ ಕಟ್ಟಿದರೆ 18 ಪೈಪ್‌ಗಳು, 3 ಜಟ್ಟುಗಳು ಹಾಗೂ ಒಂದು ಎಕರೆ ಮೇಲ್ಪಟ್ಟು ಭೂಮಿ ಹೊಂದಿರುವ ರೈತರು 4,139 ರೂ.ಅನ್ನು ಕಂಪನಿಗೆ ಸಂದಾಯ ಮಾಡಿದರೆ ರಿಯಾಯಿತಿ ದರದಲ್ಲಿ 30 ಪೈಪ್‌ಗಳು, 5 ಜಟ್ಟುಗಳನ್ನು 4 ದಿನಗಳಲ್ಲಿ ಕೊಡಿಸಲಾಗುತ್ತದೆ. ಹಾಗಾಗಿ ರೈತರು ಇದರ ಅನುಕೂಲ ಪಡೆಯಬೇಕು ಎಂದು ತಿಳಿಸಿದರು.

2023-24 ನೇ ಸಾಲಿನಲ್ಲಿ 23 ರೈತರಿಗೆ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಕ್ಕೆ ಟಾರ್ಪಲ್ ಹೊದಿಕೆ, ಡೀಸೆಲ್ ಮೋಟಾರ್, ತಂತಿ ಬೇಲಿ ವಿತರಿಸಲಾಗಿದೆ. ರೈತರು ಬೆಳೆದ ಆಹಾರ ಪದಾರ್ಥಗಳನ್ನು ಸಂಸ್ಕರಿಸಲು ಕೃಷಿ ಸಂಸ್ಕರಣ ಯೋಜನೆಯಡಿ 3,002 ರೈತರಿಗೆ ಗುಣಮಟ್ಟದ ಟಾರ್ಪಾಲ್‌ಗಳನ್ನು ವಿತರಣೆ ಮಾಡಲಾಗಿದೆ. 250 ರೈತರಿಗೆ ಟ್ರ್ಯಾಕ್ಟರ್, ರೊಟವೇಟರ್‌ಗಳನ್ನು ಸಬ್ಸಿಡಿಯಲ್ಲಿ ಕೊಡಿಸಲಾಗಿದೆ. 7 ವರ್ಷದಿಂದ ಪ್ರತಿ ವರ್ಷ 1 ಗ್ರಾಮ ಆಯ್ಕೆ ಮಾಡಿಕೊಂಡು ಬಿತ್ತನೆ ರಾಗಿ ಗೊಬ್ಬರ ವಿತರಣೆ ಮಾಡಲಾಗಿದೆ. ಕಳೆದ ವರ್ಷ ಮುಂಗಾರಿನಲ್ಲಿ 5 ಕ್ವಿಂಟಾಲ್ ಹೆಸರು ಕಾಳು, 10 ಕ್ವಿಂಟಾಲ್ ಅಲಸಂದೆ, 500 ಕೆಜಿ ತೊಗರಿ, 20 ಟನ್ ಕಡಲೆಕಾಳು, 6 ಟನ್ ಮುಸುಕಿನ ಜೋಳ, 20 ಟನ್ ಬಿತ್ತನೆ ರಾಗಿ ಬೀಜಗಳನ್ನು ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ಬಿತ್ತನೆ ಸಮಯದಲ್ಲಿ ವಿತರಿಸಲಾಯಿತು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ವಿಠಲ್‌ಕುಮಾರ್ ಮಾತನಾಡಿ, ಶಾಸಕರಾದ ಸಿ.ಎನ್. ಬಾಲಕೃಷ್ಣ ಅವರು 50 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ರೈತ ಸಂಪರ್ಕ ಕೇಂದ್ರ ಹಾಗೂ ಗೋದಾಮು ನಿರ್ಮಾಣ ಮಾಡಿಸಿರುವುದರಿಂದ ಕೃಷಿ ಇಲಾಖೆಯ ಕೆಲಸ ಕಾರ್ಯಗಳಿಗೆ ಹೆಚ್ಚು ಅನುಕೂಲವಾಗಿದೆ. ಕೃಷಿ ಅಧಿಕಾರಿ ದಿನೇಶ್ ರೈತರಿಗೆ ಬೇಕಾದ ಕೃಷಿ ಪರಿಕರಗಳನ್ನು ಸಕಾಲದಲ್ಲಿ ಕೊಡಿಸುವ ಮೂಲಕ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ವಿಜಯಕುಮಾರ್, ರಾಜೇಶ್ವರಿ, ಚೈತ್ರಾ, ಸಾವಯವ ಕೃಷಿಕ ರಮೇಶ್, ಹೆಬ್ಬಾಳಲು ಮಂಜೇಗೌಡ ಕಟ್ಟಿಗೆಹಳ್ಳಿ ಚೆನ್ನೇಗೌಡ ಇತರರು ಹಾಜರಿದ್ದರು.