ಪುತ್ತೂರು: ನಾವು ಮಾಡುವ ಯಾವುದೇ ಕೆಲಸವೂ ಪರರಿಗೆ ಇಷ್ಟವಾಗಿ ಅವರಿಗೆ ಖುಷಿಯನ್ನು ತಂದುಕೊಟ್ಟರೆ ಅದುವೇ ನಮ್ಮ ಜೀವನದ ನಿಜವಾದ ಸಾರ್ಥಕ್ಯ. ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣವೆಂಬುವುದು ಬಹುಮುಖ್ಯ ಘಟ್ಟ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಲೇಬೇಕು. ಅಂತೆಯೇ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಬೇಕು ಎಂದು ತುಳು ಸಿನಿಮಾ ನಿರ್ಮಾಪಕ ಹಾಗೂ ನಟ ವಿನೀತ್ ಕುಮಾರ್ ಹೇಳಿದರು.
ಪುತ್ತೂರಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ ತಾರಂಗನ್-2022 ಅಂತರ್ ತರಗತಿ ಫೆಸ್ಟ್ ನಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಪ್ರತಿಭೆಗಳಿಗೆ ಸೂಕ್ತವಾದ ವೇದಿಕೆಯನ್ನು ಕಲ್ಪಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿಯೇ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರೆ ಮುಂದಿನ ಜೀವನ ಸುಲಭ ಎಂದರು.
ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳೀಕೃಷ್ಣ ಕೆ.ಎನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳು ನಾಡಿನ ಚಿತ್ರರಂಗದಲ್ಲಿ ನಾಯಕ ನಟನಾಗಿ ವಿನೀತ್ ಕುಮಾರ್ ಗುರುತಿದಿಕೊಳ್ಳುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಇತ್ತೀಚೆಗಷ್ಟೇ ಮೂಡಿಬಂದ ಇವರ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಚಿತ್ರ ಒಂದು ಕುಟುಂಬ ಆಧಾರಿತ ಸಿನಿಮಾವಾಗಿದ್ದು ಸಾಮಾಜಿಕವಾಗಿ ಹಲವಾರು ಒಳ್ಳೆಯ ಸಂದೇಶವನ್ನು ನೀಡಿದೆ ಎಂದರು.
ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಅಶ್ವಿನಿ ಹಾಗೂ ಸಾಕ್ಷಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರವಿಕಲಾ, ವಿದ್ಯಾರ್ಥಿ ಸಂಯೋಜಕ ಪುಶನ್ ಪ್ರಸಾದ್ ಹಾಗೂ ಆಕಾಂಕ್ಷ ಉಪಸ್ಥಿತರಿದ್ದರು.
ತೃತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಆಕಾಂಕ್ಷ ಸ್ವಾಗತಿಸಿದರು. ಪುಶನ್ ಪ್ರಸಾದ್ ವಂದಿಸಿದರು. ವಿದ್ಯಾರ್ಥಿನಿ ಸೌಮ್ಯ ಕಾರ‌್ಯಕ್ರಮ ನಿರೂಪಿಸಿದರು. ವಿಭಾಗದ ಉಪನ್ಯಾಸಕ ಪುನೀತ್ ಕುಮಾರ್ ಹಾಗೂ ಉಪನ್ಯಾಸಕಿ ಜ್ಯೋತಿ ಎಂ.ಎಂ ಸಹಕರಿಸಿದರು.