ಪುತ್ತೂರು ವಿವೇಕಾನಂದ ವಿದ್ಯಾಲಯದಲ್ಲಿ ವಿವೇಕ ಸರಣಿ, ವಿವೇಕ ಸ್ಮೃತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ.ರತ್ನಾಕರ ಮಲ್ಲಮೂಲೆ ಮಾತನಾಡಿದರು. ಪ್ರೊ.ಶ್ರೀಕೃಷ್ಣ ಗಣರಾಜ ಭಟ್, ಡಾ.ವಿದ್ಯಾ ಎಸ್., ಬೆಳ್ಳಾಲ ಗೋಪಿನಾಥ್ ರಾವ್ ಉಪಸ್ಥಿತರಿದ್ದರು.
- ಪ್ರೊ.ರತ್ನಾಕರ ಮಲ್ಲಮೂಲೆ ಅಭಿಪ್ರಾಯ
- ‘ವಿವೇಕವಾಣಿ’ ಸರಣಿ ಉಪನ್ಯಾಸ
ಪುತ್ತೂರು: ಶಿಕ್ಷಣವನ್ನು ಪಡೆದರೆ ಮಾತ್ರ ಸಾಲದು, ಪ್ರಜ್ಞಾವಂತರಾಗಬೇಕು. ಶಿಕ್ಷಣವು ಪ್ರಜ್ಞಾವಂತಿಕೆಯನ್ನು ಬೆಳೆಸುವ ಪ್ರಮುಖ ದಾರಿಯಾಗಿದೆ. ಉತ್ತಮ ನಾಯಕನಾಗಬೇಕಾದರೆ ಸ್ವಾಮಿ ವಿವೇಕಾನಂದರು ಹಾಗೂ ನಾರಾಯಣಗುರುಗಳ ಜೀವನವನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು. ಯುವಜನತೆ ಮಹಾತ್ಮರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಾತಿ, ಮತ ಮತ್ತು ಭಾಷೆಯ ಭೇದಗಳನ್ನು ಮೀರಿ ನ್ಯಾಯಯುತ, ಸಮಾನತೆಯ ಮತ್ತು ಸೌಹಾರ್ದದ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಕಾಸರಗೋಡು ಸರ್ಕಾರಿ ಮಹಾವಿದ್ಯಾಲಯದ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊ.ರತ್ನಾಕರ ಮಲ್ಲಮೂಲೆ ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದ ‘ವಿವೇಕವಾಣಿ’ ಸರಣಿ ಉಪನ್ಯಾಸ ಕಾರ್ಯಕ್ರಮದ ಐವತ್ತೇಳನೆಯ ಉಪನ್ಯಾಸ ಹಾಗೂ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯುಎಸಿ ಸಹಯೋಗದ ‘ವಿವೇಕ ಸ್ಮೃತಿ’ ಕಾರ್ಯಕ್ರಮದ ಮೂವತ್ತನೆಯ ಉಪನ್ಯಾಸದಲ್ಲಿ ‘ವಿವೇಕದ ಬೆಳಕು: ವಿವೇಕಾನಂದ ಹಾಗೂ ನಾರಾಯಣಗುರು ತತ್ವ ಮೀಮಾಂಸೆ’ ವಿಷಯದ ಕುರಿತು ಮಾತನಾಡಿದರು.
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ)ದ ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ ಭಟ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಸಂಸ್ಕೃತಿ ಹಾಗೂ ಹಾಗೂ ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ವಿದ್ಯಾ ಎಸ್., ಐಕ್ಯುಎಸಿ ಸಂಯೋಜಕಿ ಡಾ.ರವಿಕಲಾ, ನಿವೃತ್ತ ಯೋಧ ಬೆಳ್ಳಾಲ ಗೋಪಿನಾಥ್ ರಾವ್ ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಚಂದ್ರು ಹೆಗಡೆ ಸ್ವಾಗತಿಸಿದರು. ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ.ವಿಜಯಸರಸ್ವತಿ ಬಿ. ವಂದಿಸಿದರು. ವಿದ್ಯಾರ್ಥಿನಿ ಕೌಸಲ್ಯಾ ಎನ್. ಕಾರ್ಯಕ್ರಮ ನಿರೂಪಿಸಿದರು.