ಪುತ್ತೂರು: ಶ್ರೀಶಾರದಾ ಭಜನಾ ಮಂದಿರದ ಪ್ರತಿಷ್ಠಾಪನೆಗೊಂಡಿರುವ ಶ್ರೀಶಾರದಾ ವಿಸರ್ಜನೆ ಮೆರವಣಿಗೆ ಮಂಗಳವಾರ ಸಾಯಂಕಾಲ ನಡೆಯಲಿರುವ ಹಿನ್ನಲೆ ಸಾರ್ವಜನಿಕರು ವಾಹನ ಸಂಚಾರದಲ್ಲಿ ಬದಲಾವಣೆ ಮಾಡಿಕೊಂಡು ಪೊಲೀಸ್ ಇಲಾಖೆ ಜತೆಗೆ ಸಹಕಾರ ನೀಡಬೇಕಾಗಿದೆ.
ಪುತ್ತೂರು ಬೊಳುವಾರು ವೃತ್ತದಿಂದ ಮುಖ್ಯ ರಸ್ತೆಗಳಲ್ಲಿ ಸಾಯಂಕಾಲ ೪.೩೦ರಿಂದ ಶೋಭಾಯಾತ್ರೆ ನಡೆಯಲಿದ್ದು, ೨೫ಕ್ಕೂ ಅಧಿಕ ಸ್ಥಬ್ಧ ಚಿತ್ರಗಳು ಶೋಭಾಯಾತ್ರೆಯಲ್ಲಿ ಭಾಗವಹಿಸುವ ಜತೆಗೆ ಕುಣಿತ ಬಜನೆಯ ಸುಮಾರು ೮೦ ತಂಡಗಳ ಮೂಲಕ ೧೮೦೦ ಮಂದಿ ಹಾಗೂ ೧೫೦೦ ಮಂದಿ ಭಜಕರು ಪಾಲ್ಗೊಳ್ಳಲಿದ್ದಾರೆ. ವೇದಘೋಷ, ವಾದ್ಯವೃಂದ, ಚೆಂಡೆ, ವೀರಗಾಸೆ, ಡೊಳ್ಳುಕುಣಿತ ಸೇರಿ ವಿವಿಧ ತಂಡಗಳು ಭಾಗವಹಿಸುವ ಬಗ್ಗೆ ಸಮಿತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಇದರಿಂದ ಬೊಳುವಾರಿನಿಂದ ವಾಹನ ಪೇಟೆಯ ಮೂಲಕ ದರ್ಬೆಯ ವರೆಗೆ ವಾಹನ ಸಂಚಾರಕ್ಕೆ ಸಮಸ್ಯೆಯಾಗಲಿದೆ.
ಮಾಣಿ ಭಾಗದಿಂದ ಬಂದು ಉಪ್ಪಿನಂಗಡಿ ರಸ್ತೆಗೆ ನೆಗರು ನಗರದ ಮೂಲಕ ತೆರಳಬೇಕಾಗಿದೆ. ಉಪ್ಪಿನಂಗಡಿ ರಸ್ತೆಯಿಂದ ಸುಳ್ಯ ರಸ್ತೆಯನ್ನು ಸಂಪರ್ಕಿಸುವ ವಾಹನಗಳು ಕೊಟೆಚ್ಚಾ ಸಮೀಪದಿಂದ ಎಪಿಎಂಸಿ ರಸ್ತೆಯ ಮೂಲಕ ಅರುಣಾ ಥಿಯೇಟರ್ ಸಮೀಪ ಮುಖ್ಯ ರಸ್ತೆಯನ್ನು ಸಂಪರ್ಕಿಸಬೇಕಾಗಿದೆ. ಬೈಪಾಸ್ ರಸ್ತೆ ಸಂಪೂರ್ಣ ವಾಹನ ಸಂಚಾರಕ್ಕೆ ಮುಕ್ತವಾಗಿರಲಿದ್ದು, ನಗರದ ಒಳಗಿನ ರಸ್ತೆಗಳನ್ನು ವಾಹನ ಸವಾರರು ಬಳಸದೇ ಪರ್ಯಾಯ ರಸ್ತೆಯಲ್ಲಿ ಸಂಚರಿಸುವುದು ಉತ್ತಮ ಎಂಬ ಅಭಿಪ್ರಾಯ ಕೇಳಿ ಬಂದಿದೆ.