ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರ ಅಭಿಷೇಕಕ್ಕೆ ಶುದ್ಧ ಎಳ್ಳೆಣ್ಣೆ ಸಮರ್ಪಣೆಗೆ ಸೋಮವಾರ ಬೆಳಗ್ಗೆ ಚಾಲನೆ ನೀಡಲಾಯಿತು.
ಸಮರ್ಪಣಾ ಕಾರ್ಯಕ್ಕೆ ಚಾಲನೆ ನೀಡಿದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ ದೇವಸ್ಥಾನದಲ್ಲಿ ಹಿಂದೆ ನಡೆದ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಶುದ್ಧ ಎಳ್ಳೆಣ್ಣೆಯಿಂದ ಅಭಿಷೇಕ ನಡೆಸಬೇಕೆಂಬುದು ಕಂಡುಬಂದಿದ್ದು, ಸಮಿತಿಯಿಂದ ದೀಪಾವಳಿಯ ಸಮಯದಲ್ಲಿ ಶುದ್ಧ ಎಳ್ಳೆಯ ಅಭಿಷೇಕ ಕಾರ್ಯಗತ ಮಾಡಲಾಗಿದೆ. ಅ.೧೮ರಂದು ಬೆಳಗ್ಗೆ ೧೦ರಿಂದ ೧೨ವರೆಗೆ ಎಳ್ಳೆಣ್ಣೆ ಅಭಿಷೇಕ ನಡೆಯಲಿದೆ. ಆ ಬಳಿಕ ಸೇವೆ ಮಾಡಿದವರು ಪ್ರಸಾದ ರೂಪದಲ್ಲಿ ಎಣ್ಣೆಯನ್ನು ಸ್ವೀಕರಿಸಿ ಔಷಧ ರೂಪದಲ್ಲಿ ಬಳಸುವಂತೆ ದೈವಜ್ಞರು ಸೂಚಿಸಿದ್ದರು ಎಂದು ತಿಳಿಸಿದರು.
ಅರ್ಚಕ ವಸಂತ ಕೆದಿಲಾಯ, ಪ್ರಮುಖರಾದ ಕಿಟ್ಟಣ್ಣ ಗೌಡ, ಶಿವರಾಮ ಆಳ್ವ ಸಾಜ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿನಯ ಸುವರ್ಣ, ಸುಭಾಶ್ ರೈ ಬೆಳ್ಳಿಪ್ಪಾಡಿ, ಮಹಾಬಲ ರೈ ವಳತ್ತಡ್ಕ, ಬಿ.ಈಶ್ವರ ನಾಯ್ಕ ಬೇಡೆಕರ್, ಗಾಣದ ಮಾಲೀಕ ಮೋಹನ್ ಮಣಿಯಾಣಿ ಮತ್ತಿತರರು ಉಪಸ್ಥಿತರಿದ್ದರು.