ಜಿಲ್ಲೆ

ಪುತ್ತೂರು ದೇಗುಲದ 1 ಎಕರೆ ಜಾಗ ಸ್ವಾಧೀನ - ಸರ್ಕಾರಿ ಬಸ್ ನಿಲ್ದಾಣದ ಸಮೀಪದ ನೆಲ್ಲಿಕಟ್ಟೆಯಲ್ಲಿ ಪ್ರಕ್ರಿಯೆ

Mangaluru - Nishantha Narayana

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿದಿದ್ದು, ಮಂಗಳವಾರ ಸರ್ಕಾರಿ ಬಸ್ ನಿಲ್ದಾಣದ ಸಮೀಪದ ನೆಲ್ಲಿಕಟ್ಟೆಯಲ್ಲಿ ಸುಮಾರು 1 ಎಕರೆ ಜಾಗವನ್ನು ಮರಳಿ ಪಡೆದುಕೊಳ್ಳಲಾಯಿತು.

ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ದೇವಸ್ಥಾನಕ್ಕೆ ಬರುವ ಭಕ್ತಗೆ ವಸತಿಗೃಹ, ಸಭಾಂಗಣ, ವಿಶಾಲ ಕೊಠಡಿಗಳ ಸಮಸ್ಯೆಯಿದ್ದು, ನೆಲ್ಲಿಕಟ್ಟೆಯ ಜಾಗವನ್ನು ಇದಕ್ಕಾಗಿ ಬಳಸಿಕೊಳ್ಳಲಾಗುವುದು. ಎರಡು ಅಂತಸ್ತುಗಳನ್ನು ವಾಣಿಜ್ಯ ಬಳಕೆಗೆ ಬಳಸಿ ಬಾಡಿಗೆಗೆ ನೀಡಲಾಗುವುದು. ಉಳಿದ ಅಂತಸ್ತುಗಳಲ್ಲಿ ಪ್ರವಾಸಿಗರ ಅನುಕೂಲಕ್ಕೆ ಬೇಕಾದ ರೀತಿ ಬಳಸಿಕೊಳ್ಳಲಾಗುವುದು. 25 ಕೋಟಿಯಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುವುದು. ಇನ್ನು ಸುಮಾರು 13 ಎಕರೆ ಜಾಗ ಖಾಸಗಿಯವರ ಕೈಯಲ್ಲಿದ್ದು, ಹಂತ ಹಂತವಾಗಿ ಸ್ವಾಧೀನ ಪಡಿಸಲಾಗುವುದು ಎಂದರು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ಮಹಾಲಿಂಗೇಶ್ವರ ದೇವರ ಪ್ರೇರಣೆಯಂತೆ ಶಾಸಕರ ಮಾರ್ಗದರ್ಶನದಲ್ಲಿ 6 ನಿವೇಶನಗಳನ್ನು ಸೌಹಾರ್ದತೆಯಿಂದ ಪಡೆದುಕೊಂಡಿದ್ದೇವೆ. ಅನ್ನಛತ್ರದಲ್ಲಿ ಭಕ್ತರಿಗೆ, ಶಾಲಾ ಮಕ್ಕಳಿಗೆ ವ್ಯವಸ್ಥಿತ ರೀತಿಯಲ್ಲಿ ಅನ್ನದಾನ ನೀಡಲಾಗುತ್ತಿದ್ದು, ತಿಂಗಳಿಗೆ 13 ಲಕ್ಷವನ್ನು ವಿನಿಯೋಗ ಮಾಡಲಾಗುತ್ತಿದೆ. ಖಾಸಗೀ ಕಾರ್ಯಕ್ರಮಗಳಿಗೆ ದೇವಸ್ಥಾನದಿಂದ ಉಚಿತ ಅನ್ನದಾನ ಮಾಡಲು ಸಾಧ್ಯವಿಲ್ಲ ಎಂದರು.

ಉಪ್ಪಿನAಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಕ್, ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ನಳಿನಿ ಪಿ.ಶೆಟ್ಟಿ, ಕೃಷ್ಣವೇಣಿ, ಈಶ್ವರ ನಾಯ್ಕ ಬೇಡೆಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ಮಹಾಬಲ ರೈ ವಳತ್ತಡ್ಕ, ದಿನೇಶ್ ಪಿ.ವಿ.ಕುಲಾಲ್, ನಗರ ವಲಯ ಅಧ್ಯಕ್ಷ ಲೋಕೇಶ್ ಗೌಡ ಪಡ್ಡಾಯೂರು, ಕುಂಜಾರು ಶ್ರೀ ಜನಾರ್ದನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ರೋಹನ್ ಪೂಜಾರಿ ಮಾವಿನಕಟ್ಟೆ, ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ಕೆ.ವಿ., ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಗುತ್ತಿಗೆದಾರ ರಂಜಿತ್ ಬಂಗೇರ, ಸುದರ್ಶನ ಗೌಡ ಮುರ ಮತ್ತಿತರರಿದ್ದರು.

ದೇವಸ್ಥಾನದ ವ್ಯವಸ್ಥೆಯನ್ನು ಸರಿದೂಗಿಸಲಾಗದ ಕಾರಣದಿಂದ ಬ್ರಿಟಿಷ್ ಸರ್ಕಾರ 102 ವರ್ಷದ ಹಿಂದೆ ಅಜ್ಜನಿಗೆ ಗೇಣಿಗೆ ನೀಡಿತ್ತು. ಜಾಗವನ್ನು ಇಲ್ಲಿಯ ತನಕ ಕಾಪಾಡಿಕೊಂಡು ಬಂದಿದ್ದೇವೆ. ಕಳೆದ ವರ್ಷದ ವರೆಗೂ ದೇವಸ್ಥಾನಕ್ಕೆ 100 ರೂ. ಗೇಣಿಯ ಹಣವನ್ನು ಕಟ್ಟಲಾಗುತ್ತಿತ್ತು. ಈಗ ಅಭಿವೃದ್ಧಿಗೆ ಬೇಕಾಗಿ ಸಂತೋಷದಿAದ ಜಾಗವನ್ನು ಬಿಟ್ಟುಕೊಡುತ್ತಿದ್ದೇವೆ.

| ನಿರ್ಮಲ್ ಕುಮಾರ್ ಜೈನ್

ಜಾಗ ಬಿಟ್ಟುಕೊಟ್ಟವರು

ಅನ್ನಛತ್ರದಲ್ಲಿ ನಡೆಯುವ ಉಚಿತ ಅನ್ನಸಂತರ್ಪಣೆಗೆ ಕತ್ತರಿ ಬಿದ್ದಿಲ್ಲ. ದಿನಕ್ಕೆ 6ಸಾವಿರ ಮಂದಿಗೆ ಅನ್ನದಾನ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ. ಬೇರೆ ಕಡೆ ಕಾರ್ಯಕ್ರಮ ಮಾಡಿ ದೇವಸ್ಥಾನದಿಂದ ಉಚಿತ ಊಟ ಕಳುಹಿಸಿ ಎನ್ನುವುದಕ್ಕೆ ಕತ್ತರಿ ಹಾಕಿ 50 ರೂ. ದರ ವಿಧಿಸಲಾಗುತ್ತದೆ. ಸರ್ಕಾರಿ ಕಾರ್ಯಕ್ರಮದ ಹೊರತಾಗಿ ಬೇರೆ ದೇವಸ್ಥಾನಗಳಲ್ಲಿ ಪಾತ್ರೆಯಲ್ಲಿ ಬಲ್ಕ್ ಪಾರ್ಸೆಲ್ ರೀತಿಯಲ್ಲಿ ಊಟ ನೀಡುವ ವ್ಯವಸ್ಥೆಯಿಲ್ಲ.

| ಅಶೋಕ್ ಕುಮಾರ್ ರೈ

ಶಾಸಕ