ಜಿಲ್ಲೆ

ರಥೋತ್ಸವದ ದಿನ ಡ್ರೋನ್ ಹಾರಾಟ ನಿಷೇಧ - ಅಧಿಕಾರಿಗಳಿಂದ ಸಲಹೆ - ಪುತ್ತೂರು ಜಾತ್ರೆ ಪೂರ್ವಭಾವಿ ಸಭೆ

Mangaluru - Nishantha Narayana

ಪುತ್ತೂರು: ಜಾತ್ರೋತ್ಸವದ ಸಂದರ್ಭದಲ್ಲಿ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ವಿಮೆ ಸೌಲಭ್ಯವನ್ನು ಆಡಳಿತ ಮಂಡಳಿ ಕೈಗೊಳ್ಳಬೇಕು. ರಥೋತ್ಸವದ ದಿನ ಹಾಗೂ ಧ್ವಜಾರೋಹಣದ ದಿನ ಡ್ರೋನ್ ಹಾರಾಟಕ್ಕೆ ಅವಕಾಶ ಇರುವುದಿಲ್ಲ. ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದ ಸ್ಟಾಲ್‌ನವರಿಗೆ ವಿದ್ಯುತ್ ಸಂಪರ್ಕವಿಲ್ಲ. ದೇವಸ್ಥಾನದ ಆಸುಪಾಸಿನಲ್ಲಿ ವಾಹನ ನಿಲುಗಡೆಗೂ ಅವಕಾಶಕೊಡುವಂತಿಲ್ಲ. ಪ್ರಸಾದ ವಿತರಣೆ ಹಾಗೂ ಭೋಜನ ನೀಡುವ ಸಂದರ್ಭ ಜನರನ್ನು ಕಾಯಿಸಬಾರದು.

ಇದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.೧೦ರಿಂದ ೨೦ರವರೆಗೆ ನಡೆಯುವ ವರ್ಷಾವಧಿ ಜಾತ್ರೆಯ ಅಂಗವಾಗಿ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಕೇಳಿ ಬಂದ ಮುಖ್ಯ ಸಲಹೆಗಳು.

ಜನ ಸಂದಣಿ ಸಂದರ್ಭ ಮೊಬೈಲ್ ಟವರ್‌ಗಳು ಕೈಕೊಟ್ಟು ಸಂಪರ್ಕ ಅಸಾಧ್ಯವಾಗುವುದರಿಂದ ಹೆಚ್ಚುವರಿಯಾಗಿ ತಾತ್ಕಾಲಿಕ ಮೊಬೈಲ್ ಟವರ್ ಅಳವಡಿಸಬೇಕು. ರಥೋತ್ಸವದ ಸಂದರ್ಭ ನೂಕುನುಗ್ಗಲು ಆಗದಂತೆ ರಥಬೀದಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಜನರಿಗೆ ಸರದಿ ನಿಲ್ಲದೆ ತ್ವರಿತವಾಗಿ ಪ್ರಸಾದ ಹಾಗೂ ಊಟ ನೀಡುವ ವ್ಯವಸ್ಥೆಯಾಗಬೇಕು. ದೇವಸ್ಥಾನದ ಗದ್ದೆಗೆ ನೀರು ಸಿಂಪಡಣೆ ಹಾಗೂ ರಥಬೀದಿಗೆ ಮಧ್ಯಾಹ್ನದ ಸಮಯ ನಗರಸಭೆ ನೀರು ಹಾಕಬೇಕು.

ವಾಹನ ನಿಲುಗಡೆಗೆ ಹಿಂದಿನ ರೀತಿಯಲ್ಲೇ ಕೊಂಬೆಟ್ಟು, ತೆಂಕಿಲ ಶಾಲಾ ಮೈದಾನ, ಎಪಿಎಂಪಿಸಿ ಹಾಗೂ ಕಿಲ್ಲೆ ಮೈದಾನವನ್ನು ಬಳಸಿಕೊಳ್ಳಲಾಗುವುದು. ನೆಲ್ಲಿಕಟ್ಟೆ - ರೈಲ್ವೆ ನಿಲ್ದಾಣ ರಸ್ತೆಗೆ ಬೆಳಕಿನ ವ್ಯವಸ್ಥೆಯನ್ನು ಹೆಚ್ಚುವರಿಯಾಗಿ ಮಾಡಬೇಕು. ಕೊಂಬೆಟ್ಟು - ದೇವಸ್ಥಾನ ರಸ್ತೆಯಲ್ಲಿ ಬೆಳೆದ ಗಿಡಗಳನ್ನು ತೆರವು ಮಾಡಬೇಕು. ಸಿಸಿ ಕ್ಯಾಮರಗಳನ್ನು ಅಳವಡಿಸಿದರೂ, ಆಯಕಟ್ಟಿನ ಸ್ಥಳದಲ್ಲಿ ಪೊಲೀಸ್ ನಿಯೋಜಿಸಬೇಕು. ತ್ಯಾಜ್ಯ ಸಂಗ್ರಹಣೆಗೆ ನಗರಸಭೆಯಿಂದ ವಾಹನದ ವ್ಯವಸ್ಥೆ ಮಾಡಬೇಕು.

ದೇವಸ್ಥಾನದ ಆವರಣದಲ್ಲಿ ವಿದ್ಯುತ್ ದೀಪಗಳ ಅಲಂಕಾರಕ್ಕೆ ದೇವಸ್ಥಾನದ ಮೀಟರ್ ಬೋರ್ಡ್‌ನಿಂದ ಸಂಪರ್ಕ ಪಡೆಯಲಾಗುತ್ತದೆ. ಇದರಿಂದ ಓವರ್‌ಲೋಡ್ ಆಗಿ ವಿದ್ಯುತ್ ಹೋದರೆ ಸರಿಪಡಿಸಲು ಸಮಸ್ಯೆಯಾಗುತ್ತದೆ. ಅಂಗಡಿಗಳಿಗೂ ವಿವಿಧ ಕಡೆಯಿಂದ ವಯರ್ ಎಳೆದು ಸಂಪರ್ಕ ಕೊಡುವುದನ್ನು ಸ್ಥಗಿತ ಮಾಡಬೇಕು. ವ್ಯವಸ್ಥಿತವಾಗಿ ವಿದ್ಯುತ್ ಪೂರೈಕೆಗೆ ಬೋರ್ಡ್ ಅಳವಡಿಕೆ ಅಥವಾ ಜನರೇಟರ್ ವ್ಯವಸ್ಥೆ ಮಾಡಬೇಕು. ಮುಖ್ಯ ರಸ್ತೆಯಲ್ಲಿ ದೀಪಗಳನ್ನು ಹಾಕುವವರೂ, ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮೆಸ್ಕಾಂ ಅಽಕಾರಿ ರಾಮಚಂದ್ರ ಹೇಳಿದರು.

ಕೆ.ಎಸ್.ಆರ್.ಟಿ.ಸಿ. ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಸಾದ್ ಮಾತನಾಡಿ, ಜನರ ಓಡಾಟಕ್ಕೆ ಹೆಚ್ಚುವರಿ ಬಸ್‌ಗಳ ಓಡಾಟಕ್ಕೆ ಕ್ರಮವನ್ನು ಕೈಗೊಳ್ಳಲಾಗಿದೆ. ೧೬ ಹಾಗೂ ೧೭ರಂದು ರಾತ್ರಿ ಹೊತ್ತಿನಲ್ಲೂ ವಿವಿಧ ಪಟ್ಟಣಗಳಿಗೆ ಬಸ್ ವ್ಯವಸ್ಥೆ ಮಾಡಲಾಗುತ್ತದೆ. ಉಳಿದ ದಿನಗಳಲ್ಲಿ ಬೆಳಗ್ಗೆ ಉಪ್ಪಿನಂಗಡಿ, ವಿಟ್ಲ, ಮಾಣಿ, ಕಾಣಿಯೂರು ಸೇರಿ ಆಸುಪಾಸಿನ ಪ್ರದೇಶಗಳಿಗೆ ಹೆಚ್ಚಿನ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಜನರ ಓಟಾಟವನ್ನು ಗಮನಿಸಿಕೊಂಡು ಮಾರ್ಗ ವಿಸ್ತರಣೆ ಮಾಡುವ ನಿಟ್ಟಿನಲ್ಲೂ ಕ್ರಮಕೈಗೊಳ್ಳಲಾಗುವುದು ಎಂದರು.

ಶಾಸಕ ಅಶೋಕ್ ಕುಮಾರ್ ರೈ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಈಶ್ವರ ಬೇಡೆಕರ್, ಸುಭಾಷ್ ರೈ ಬೆಳ್ಳಿಪಾಡಿ, ವಿನಯ ಸುವರ್ಣ, ಕೃಷ್ಣವೇಣಿ ಎಂ., ದಿನೇಶ್ ಕುಲಾಲ್ ಪಿ.ವಿ., ಮಹಾಬಲ ಶೆಟ್ಟಿ ವಳತ್ತಡ್ಕ, ನಳಿನ್ ಪಿ. ಶೆಟ್ಟಿ, ತಹಸೀಲ್ದಾರ ಪುರಂದರ ಹೆಗ್ಡೆ, ದೇವಸ್ಥಾನ ಕಾರ್ಯನಿರ್ವಹಣಾಽಕಾರಿ ಶ್ರೀನಿವಾಸ ಕೆ. ವಿ., ಪೊಲೀಸ್ ಇಲಾಖೆಯ ಸುನಿಲ್ ಕುಮಾರ್, ಸೇಸಮ್ಮ, ಉದಯ ರವಿ, ನಗರ ಸಭೆ ಆರೋಗ್ಯ ನಿರೀಕ್ಷಕ ರಾಮಚಂದ್ರ, ತಾಲೂಕು ಆರೋಗ್ಯಾಽಕಾರಿ ದೀಪಕ್ ಉಪಸ್ಥಿತರಿದ್ದರು.

ಜಾತ್ರಾಮಹೋತ್ಸವಕ್ಕೆ ವಿಮಾ ಕಂಪನಿಗಳ ಜತೆಗೆ ಚರ್ಚೆ ನಡೆಸಿ ಒಂದು ಕೋಟಿ ಮೊತ್ತವನ್ನು ಮಾಡಲು ಪ್ರಯತ್ನ ಮಾಡಲಾಗುವುದು. ಕಾನೂನು ಸುವ್ಯವಸ್ಥೆ ಹಾಗೂ ಜನರಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಜತೆಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಸೂಚನೆಗಳನ್ನು ನೀಡಲಾಗಿದೆ. ಈ ಬಾರಿ ರಥಸೇವೆಯನ್ನು ಸುಮಾರು ೨೦೦ ಮಂದಿ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಮಾಸ್ಟರ್ ಪ್ಲಾನ್‌ಗೆ ಸರ್ಕಾರದ ಒಪ್ಪಿಗೆ ಸಿಕ್ಕ ತಕ್ಷಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗುವುದು.

| ಅಶೋಕ್ ಕುಮಾರ್ ರೈ ಶಾಸಕರು, ಪುತ್ತೂರು

ಡ್ರೋನ್ ಹಾರಾಟದಿಂದ ದೇವಸ್ಥಾನದ ಆವರಣದಲ್ಲಿ ಗಿಡುಗನ ಹಾರಾಟಕ್ಕೆ ಸಮಸ್ಯೆಯಾಗುತ್ತಿದೆ. ಕೆಲವು ದೇವಸ್ಥಾನದಲ್ಲಿ ಡ್ರೋನ್ ಹಾರಾಟದಿಂದ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಜಾತ್ರೋತ್ಸವದ ಅಂಗವಾಗಿ ಕೊಡಿ ಏರುವ ಸಂದರ್ಭ ಹಾಗೂ ರಥೋತ್ಸವದಲ್ಲಿ ಡ್ರೋನ್ ಬಳಕೆ ಮಾಡುವುದನ್ನು ನಿಷೇಽಸಲಾಗಿದೆ. ಅಂಗಡಿಗಳನ್ನು ವ್ಯವಸ್ಥಿತವಾಗಿ ಹಾಕುವ ಮೂಲಕ ಜನರಿಗೆ ನಿಲ್ಲಲು ಹೆಚ್ಚಿನ ಸ್ಥಳಾವಕಾಶಗಳನ್ನು ನೀಡಲಾಗುವುದು. ಸಿಡಿಮದ್ದುಗಳನ್ನು ಭಕ್ತರಿಂದಲೇ ಸಿಡಿಸುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

| ಈಶ್ವರ ಭಟ್ ಪಂಜಿಗುಡ್ಡೆ

ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ