- ಶಾಸಕ ಅಶೋಕ್ ಕುಮಾರ್ ರೈ ಕಾರ್ಯವೈಖರಿ
- ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ
ಪುತ್ತೂರು: ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಲ್ಲಿ ೨ ಸಾವಿರ ಕೋಟಿಗೂ ಮಿಕ್ಕಿ ಅನುದಾನ ತರುವ ಮೂಲಕ ಅಭಿವೃದ್ಧಿಯ ಶಕೆಯನ್ನು ಬರೆಯಲಾಗಿದೆ. ಶಾಸಕ ಅಶೋಕ್ ಕುಮಾರ್ ರೈ ಅವರ ಕಾರ್ಯವೈಖರಿ ಬಗ್ಗೆ ಎದುರಾಳಿಗಳಿಂದ ಮೆಚ್ಚುವೆ ವ್ಯಕ್ತವಾಗುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸ್ವಪಕ್ಷೀಯರು, ಸಾರ್ವಜನಿಕರು, ವಿರೋಧ ಪಕ್ಷದ ಪ್ರಮುಖರಿಂದಲೂ ಅಭಿನಂದನೆಯ ಮಹಾಪೂರ ಹರಿದುಬರುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಊಹಾಪೋಹಗಳಿಗೆ ಕಾರಣವಾಗಿದೆ.
ಅಶೋಕ್ ಕುಮಾರ್ ರೈ ಮೂಲತಃ ಬಿಜೆಪಿ ಪಕ್ಷದಲ್ಲಿದ್ದು, ಪಕ್ಷಾಂತರವಾಗಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದುಕೊಂಡು ಚುನಾವಣೆಯಲ್ಲಿ ವಿಜಯಿಯಾಗಿದ್ದರು. ದಶಕಗಳ ರಸ್ತೆ ಸಮಸ್ಯೆ ಕ್ಷಣದಲ್ಲಿ ಪರಿಹಾರ, ದೇವಸ್ಥಾನದ ಜಾಗ ಮರಳಿ ಪಡೆಯುವ ಕಾರ್ಯ, ಕೇರಳ- ಕರ್ನಾಟಕ ಸಂಪರ್ಕ ಸೇತುವೆ, ರಸ್ತೆಗಳ ಅಭಿವೃದ್ಧಿ ಸೇರಿ ಪುತ್ತೂರಿನ ಅಭಿವೃದ್ಧಿಯನ್ನು ತಮ್ಮದೇ ಕಾರ್ಯವೈಕರಿಯಲ್ಲಿ ಮಾಡಿ ತೋರಿಸಿದ್ದಾರೆ. ರಾಜಕೀಯವಾಗಿ ತುಳಿಯಲು ನೋಡಿದ ಪ್ರತಿಯೊಬ್ಬರಿಗೂ ಕೆಲಸ ಕಾರ್ಯಗಳನ್ನು ಮಾಡಿ ತೋರಿಸುವ ಮೂಲಕ ಉತ್ತರ ನೀಡಿದ್ದಾರೆ.
ಇದು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಬಿಜೆಪಿ ನಾಯಕರು, ಸಂಘ ಪರಿವಾರದ ನಾಯಕರು ಸಾರ್ವಜನಿಕವಾಗಿ ಮೆಚ್ಚುಗೆ ಸೂಚಿಸುವಂತೆ ಮಾಡಿದೆ. ಬಿಜೆಪಿ ಸಂಘಟನೆಯ ಮೇಲೆಯೇ ಬೊಟ್ಟು ಮಾಡುವಂತೆ ಕಾಣಿಸುತ್ತಿದ್ದು, ಬಿಜೆಪಿ ಕಾರ್ಯಕರ್ತರನ್ನು ಗೊಂದಲಕ್ಕೆ ಒಳಗಾಗಿಸಿದೆ. ಕಾಂಗ್ರೆಸ್ ಕಾರ್ಯಕರ್ತರೊಳಗೆ ಕುತೂಹಲಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಪುತ್ತೂರಿನ ಆಡಳಿತ ಚುಕ್ಕಾಣಿ ಬಿಜೆಪಿಯಿಂದ ಕೈತಪ್ಪುವಂತೆ ಕಾಣುತ್ತಿದೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಭಾಗೀರಥಿ ಮುರುಳ್ಯ ಶ್ಲಾಘನೆ
ಕಡಬ ತಾಲೂಕಿನ ಅಲಂಗಾರು ಶ್ರೀ ಕ್ಷೇತ್ರ ಶರವೂರಿನ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಶಾಸಕ ಅಶೋಕ್ ರೈ ಕಾಂಗ್ರೆಸ್ ಶಾಸಕರಾಗಿದ್ದರೂ, ಡಾ.ಪ್ರಭಾಕರ್ ಭಟ್ ಅವರ ಗರಡಿಯಲ್ಲಿ ಪಳಗಿದವರು. ಅದಕ್ಕಾಗಿಯೇ ಅವರು ಎಲ್ಲಿ ಹೋದರೂ ಹಿಂದೂ, ಹಿಂದೂ ಎಂದು ಹೇಳುತ್ತಾರೆ ಎಂದು ಶ್ಲಾಘಿಸಿದರು. ಈ ಸಂದರ್ಭ ಸ್ವತಃ ಡಾ.ಪ್ರಭಾಕರ್ ಭಟ್ ಉಪಸ್ಥಿತರಿದ್ದು, ಶಾಸಕಿಯ ಮಾತಿಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ.
ಡಾ.ಪ್ರಸಾದ್ ಭಂಡಾರಿ ಮೆಚ್ಚುಗೆ
ಮೂರು ದಶಕಗಳಿಂದ ಪುತ್ತೂರಿನಲ್ಲಿ ಕಾಂಗ್ರೆಸ್‌ಗೆ ಸಿಂಹಸ್ವಪ್ನದಂತೆ ಕಾಡಿದ, ಹಿಂದೂ ಸಂಘಟನೆಗಳ ಕಾರ್ಯಕರ್ತರ ’ಡಾರ್ಲಿಂಗ್’ ಹಾಗೂ ಸಂಘ ಪರಿವಾರದ ಮುಂಚೂಣಿ ನಾಯಕ ಡಾ.ಪ್ರಸಾದ್ ಭಂಡಾರಿ ಪುತ್ತೂರು ಜಾತ್ರೋತ್ಸವ ಮುಗಿಯುತ್ತಿದ್ದಂತೆಯೇ, ಜಾತ್ರೋತ್ಸವವನ್ನು ಸಂಘಟಿಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಬರೆದಿದ್ದರು. ಅತ್ಯಂತ ವ್ಯವಸ್ಥಿತವಾಗಿ ಹಾಗೂ ಅದ್ದೂರಿಯಾಗಿ ನಡೆದ ಜಾತ್ರೆ ಹಿಂದಿನ ಎಲ್ಲ ವರ್ಷಗಳ ದಾಖಲೆಗಳನ್ನು ಮೀರಿದೆ ಎಂದು ಬಣ್ಣಿಸಿದ್ದರು. ಜಾತ್ರೆಯ ಸಂಘಟನೆ ಮತ್ತು ಅದರ ಯಶಸ್ಸಿನಲ್ಲಿ ಅಶೋಕ್ ಕುಮಾರ್ ರೈ ಕಾಳಜಿ ಮತ್ತು ಸಕ್ರಿಯ ಪಾತ್ರದ ಕುರಿತು ಹರ್ಷ ವ್ಯಕ್ತಪಡಿಸಿದ್ದರು.
ಸಂಘ ಪರಿವಾರದವರಿಂದಲೂ ಹೊಗಳಿಕೆ
ಊರಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬಂದಿದ್ದ ಶಾಸಕ ಅಶೋಕ್ ಕುಮಾರ್ ರೈಅವರನ್ನು ಆರ್‌ಎಸ್‌ಎಸ್ ಮುಖಂಡ ಶಿವಶಂಕರ ಬೋನಾಂತಯ, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಭಟ್, ಸಹಕಾರಿ ಸಂಘದ ಮಾಜಿ ಉಪಾಧ್ಯಕ್ಷ ಪ್ರಕಾಶ್ ಉರಿಮಜಲು ಪ್ರತ್ಯೇಕ ವೇದಿಕೆಗಳಲ್ಲಿ ಹೊಗಳಿದ್ದರು. ನಾನು ಪುತ್ತೂರಿನಲ್ಲಿ ೬ ಶಾಸಕರನ್ನು ನೋಡಿದ್ದೇನೆ. ಆದರೆ ಅಶೋಕ್ ಕುಮಾರ್ ರೈಯಂತೆ ಕೆಲಸ ಮಾಡಿದವರನ್ನು ನೋಡಿಲ್ಲ ಎಂದು ಶಿವಶಂಕರ ಬೋನಾಂತಯ ಬಣ್ಣಿಸಿ ಎಲ್ಲರನ್ನು ನಿಬ್ಬೆರಗುಗೊಳಿಸಿದ್ದರು.
ರಾಜಕೀಯದಲ್ಲಿ ಮುಂದೇನು?
ಎಲ್ಲೆಡೆ ಹೊಗಳಿಕೆ ವ್ಯಕ್ತವಾಗುತ್ತಿರುವ ಬೆಳವಣಿಗೆ ಮುಂದಿನ ರಾಜಕೀಯ ನಡೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ವಿರೋಽ ಪಾಳಯದ ಮೆಚ್ಚುಗೆ ಅಶೋಕ್ ಕುಮಾರ್ ರೈ ಅವರ ರಾಜಕೀಯ ಭವಿಷ್ಯದ ಮೇಲೆ ಯಾವ ಪರಿಣಾಮ ಬೀರಲಿದೆ? ಇದು ಬಿಜೆಪಿಯ ಆಂತರಿಕ ರಾಜಕಾರಣದ ಮೇಲೆ ಹೇಗೆ ಪ್ರಭಾವ ಬೀರಬಹುದು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ.