ಜಿಲ್ಲೆ

ನಗರಸಭೆ ಅಭಿವೃದ್ಧಿ ಕುಂಠಿತ

Dakshina Kannada

ಶ್ರವಣ್‌ಕುಮಾರ್ ನಾಳ ಪುತ್ತೂರು

ರಾಜ್ಯದಲ್ಲಿ 2018ರ ಆಗಸ್ಟ್ 31ಕ್ಕೆ ನಡೆದ ಪೌರಾಡಳಿತ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟಗೊಂಡರೂ ಅಧ್ಯಕ್ಷ- ಉಪಾಧ್ಯಕ್ಷ ಹುದ್ದೆ ಮಾತ್ರ ಕಾನೂನು ಸಮರದ ಕಾರಣದಿಂದ ವಿಳಂಬವಾಗಿದೆ. ಪುತ್ತೂರು ನಗರಸಭೆಯ ವಾರ್ಡ್‌ಗಳು ಹೊಸ ಯೋಜನೆಗಳಿಲ್ಲದೆ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಪ್ರಸ್ತುತ ನಗರಸಭೆಯ ಪ್ರತಿಯೊಂದು ನಿರ್ಧಾರವೂ ಜಿಲ್ಲಾಧಿಕಾರಿಯ ಆದೇಶದಂತೆ ನಡೆಯುತ್ತಿದ್ದು, ಚುನಾವಣೆಯಲ್ಲಿ ಆಯ್ಕೆಗೊಂಡ ಕೌನ್ಸಿಲರ್‌ಗಳು ಕೈಕಟ್ಟಿ ಕುಳಿತ್ತಿದ್ದಾರೆ.
ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆಯಿಂದ ಪುತ್ತೂರು ನಗರಸಭೆ ಬಿಡುಗಡೆಗೊಂಡ ಪ್ರತಿಯೊಂದು ಅನುದಾನ, ಎಸ್‌ಟಿ- ಎಸ್‌ಸಿ ಫಂಡ್, ಆರ್ಥಿಕ ನೆರವು ಯೋಜನೆಗೆ ಜಿಲ್ಲಾಧಿಕಾರಿ ಕಚೇರಿಯ ಕದ ತಟ್ಟಬೇಕಾಗುತ್ತದೆ. 6 ತಿಂಗಳಿನಿಂದ ಪುತ್ತೂರಿನ ಪ್ರತಿಯೊಂದು ಯೋಜನೆಗಳೂ ಅನುಮೋದನೆಗಾಗಿ ಜಿಲ್ಲಾಧಿಕಾರಿ ಕಚೇರಿಗೆ ವರ್ಗಾವಣೆಯಾಗುತ್ತಿದೆ. ಈಗಾಗಲೇ 6-7 ಫೈಲ್‌ಗಳು ಜಿಲ್ಲಾಧಿಕಾರಿಯ ಕಚೇರಿಯಲ್ಲೆ ಬಾಕಿಯಾಗಿದ್ದು, ಇದರಿಂದ ಸಾರ್ವಜನಿಕರಿಗೆ ಹಾಗೂ ಫಲಾನುಭವಿಗಳಿಗೆ ಸಿಗಬೇಕಾದ ಅನುದಾನ, ನೆರವು ವಿಳಂಬವಾಗುತ್ತಿದೆ.

ನೂತನ ಕೌನ್ಸಿಲರ್‌ಗಳಿಗೆ ಅಧಿಕಾರ ಇಲ್ಲ
ಪುತ್ತೂರು ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ಆಡಳಿತ ಜವಾಬ್ದಾರಿ ಸಹಾಯಕ ಆಯುಕ್ತರಿಂದ ಜಿಲ್ಲಾಧಿಕಾರಿಗೆ ವರ್ಗವಾಗಿದೆ. ನಗರಸಭೆಯಾಗಿರುವ ಕಾರಣ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿ ಹೊಣೆ ಹೊತ್ತಿದ್ದಾರೆ. ಸ್ಥಳೀಯಾಡಳಿತದಲ್ಲಿ ಪುರಸಭೆ ಹಂತದಲ್ಲಿ ಸಹಾಯಕ ಆಯುಕ್ತರು ಈ ಹೊಣೆ ಹೊರುತ್ತಾರೆ. ಆದರೆ ಪುತ್ತೂರು ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲದೇ ಇರುವ ಕಾರಣ ನಿತ್ಯದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುವ ಭೀತಿ ವ್ಯಕ್ತವಾಗಿದೆ. ಹಿಂದಿನ ಕೌನ್ಸಿಲ್ ಆಡಳಿತ ಕೈಗೊಂಡ ನಿರ್ಣಯಗಳನ್ನು ಪ್ರಸ್ತುತ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಪೌರಾಯುಕ್ತರು ಜಾರಿಗೊಳಿಸುತ್ತಿದ್ದಾರೆ. ಆಸ್ತಿ ತೆರಿಗೆ ಕಟ್ಟದೇ ಇರುವವರಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ವಿಶೇಷವಾಗಿ ಡಂಪಿಂಗ್ ಯಾರ್ಡ್ ಸಮಸ್ಯೆ, ಕಸ ವಿಲೇವಾರಿ ಸಮಸ್ಯೆ ಮುಂತಾದುವುಗಳಿಗೆ ಹೊಡೆತ ಬೀಳುವ ಆತಂಕ ಎದುರಾಗಿದೆ. ನೂತನ ಕೌನ್ಸಿಲರ್‌ಗಳು ಉತ್ಸಾಹದಲ್ಲಿದ್ದರೂ ಅವರಿನ್ನೂ ಅಧಿಕಾರಕ್ಕೆ ಬಾರದೇ ಇರುವ ಕಾರಣ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ.

ಒಂದು ಬಾರಿ ಮಾತ್ರ ಸಭೆ
2013ರ ಮಾರ್ಚ್ 22ರಿಂದ ಆಗಸ್ಟ್ 28ರವರೆಗೆ ಪುತ್ತೂರು ಪುರಸಭೆಯಲ್ಲಿ ಸಹಾಯಕ ಆಯುಕ್ತ ಎಚ್.ಪ್ರಸನ್ನ ಆಡಳಿತಾಧಿಕಾರಿಯಾಗಿದ್ದರು. ಆಗಸ್ಟ್ 29ರಿಂದ ಸೆ.11ವರೆಗೆ ತಹಸೀಲ್ದಾರ್ ಕುಳ್ಳೇಗೌಡ ಆಡಳಿತಾಧಿಕಾರಿಯಾಗಿದ್ದರು. 2007ರಲ್ಲಿ ಫೆ.7ರಿಂದ 2008ರ ಫೆ. 22ರವರೆಗೆ ಸಹಾಯಕ ಆಯುಕ್ತ ಪಿ. ವಸಂತ ಕುಮಾರ್ ಆಡಳಿತಾಧಿಕಾರಿಯಾಗಿದ್ದರು. ಅದಕ್ಕೂ ಮೊದಲು 2007ರ ಜನವರಿ 2ರಿಂದ ಜುಲೈ 1ರವರೆಗೆ ಸಹಾಯಕ ಆಯುಕ್ತ ಕೆ.ಎ. ಅಪ್ಪಯ್ಯ ಆಡಳಿತಾಧಿಕಾರಿಯಾಗಿದ್ದರು. 2018ರ ಸೆ.11ರಿಂದ ಜಿಲ್ಲಾಧಿಕಾರಿ ಆಡಳಿತಾಧಿಕಾರಿಯಾಗಿದ್ದಾರೆ. ಆದರೆ 2ವರ್ಷದಲ್ಲಿ 1 ಬಾರಿ ಮಾತ್ರ ಪುತ್ತೂರು ನಗರಸಭೆಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಆಡಳಿತ ವ್ಯವಸ್ಥೆ ಬಗ್ಗೆ ಸಭೆ ನಡೆಸಿದ್ದರು.

ಯಾವುದೇ ಅನುದಾನ, ಯೋಜನೆ ಜಾರಿಗೊಳಿಸಲು ಕೌನ್ಸಿಲ್ ಅನುಮೋದನೆ ಪಡೆಯುವುದು ನಿಯಮ. ನಗರಸಭೆಯಲ್ಲಿ ಕೌನ್ಸಿಲ್ ಆಡಳಿತ ಇಲ್ಲದಿರುವುದರಿಂದ ಪುತ್ತೂರಿನ ಪ್ರತಿಯೊಂದು ಯೋಜನೆಗಳ ಫೈಲ್‌ಗಳನ್ನು ಅನುಮೋದನೆಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗುತ್ತದೆ. ಜಿಲ್ಲಾಧಿಕಾರಿಗಳ ನಿರ್ದೇಶನ, ಆದೇಶದಂತೆ ನಾವು ಕರ್ತವ್ಯ ನಿರ್ವಹಿಸುತ್ತಿದ್ದೇವೆ.ರೂಪಾ ಶೆಟ್ಟಿ ಪುತ್ತೂರು ನಗರಸಭಾ ಪೌರಾಯುಕ್ತೆ