- ಶಾಸಕ ಅಶೋಕ್ ಕುಮಾರ್ ರೈ ಹೇಳಿಕೆ
- ಹಾರಾಡಿ-ಬೊಳುವಾರು ರಸ್ತೆ ಅಭಿವೃದ್ಧಿ
ಪುತ್ತೂರು: ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿ ಹಾರಾಡಿ-ಬೊಳುವಾರು ಮಧ್ಯೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ದ್ವಿಪಥವಾಗಿದ್ದ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ೧೦ ಇಂಚು ದಪ್ಪದ ಕಾಂಕ್ರೀಟ್ ಹಾಕಿ ಗುಣಮಟ್ಟದ ಕಾಮಗಾರಿ ನಡೆಸಲಾಗುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪುತ್ತೂರು-ಉಪ್ಪಿನಂಗಡಿ ರಸ್ತೆ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ತಂದು ಕೆಲಸ ಮಾಡಲಾಗುತ್ತಿದೆ. ರಾಜಕೀಯ ಲಾಭಕ್ಕಾಗಿ ಆರೋಪ ಮಾಡುವ ಬದಲು, ರಸ್ತೆಗೆ ಜಾಗ ಬಿಟ್ಟುಕೊಡದವರಿಂದ ಜಾಗ ಕೊಡಿಸುವ ಕೆಲಸವನ್ನು ವಿಪಕ್ಷದವರು ಮಾಡಲಿ ಎಂದು ಸವಾಲು ಹಾಕಿದರು.
ಕಾಮಗಾರಿ ಕಳಪೆಯಾಗಿದ್ದರೆ ಅದನ್ನು ಮುಂದುವರಿಸಲು ಬಿಡುವುದಿಲ್ಲ. ಯಾರಾದರೂ ಅಭಿವೃದ್ಧಿ ಕೆಲಸಗಳಿಗೆ ವಿರೋಧ ವ್ಯಕ್ತಪಡಿಸಿ ಪಿತೂರಿ ನಡೆಸಿದರೆ ಅಂಥ ಕಡೆಗಳಿಗೆ ಅನುದಾನವನ್ನೇ ನೀಡುವುದಿಲ್ಲ ಎಂದು ಖಾರವಾಗಿ ಹೇಳಿದರು.
ರೈಲ್ವೆ ಅಂಡರ್‌ಪಾಸ್ ಯೋಜನೆ: ಬೊಳುವಾರಿನಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ೧೨ ಮಂದಿ ಪಾಲುದಾರರಲ್ಲಿ ೮ ಮಂದಿ ಜಾಗ ನೀಡಲು ಸಮ್ಮತಿಸಿದ್ದು, ಸರ್ವೇ ಕಾರ್ಯ ನಡೆಯಲಿದೆ. ಚತುಷ್ಪಥ ರಸ್ತೆಯ ರೈಲ್ವೆ ಅಂಡರ್‌ಪಾಸ್‌ಗೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗದಿಂದ ಅಂತಿಮ ಅನುಮೋದನೆ ಸಿಕ್ಕ ತಕ್ಷಣ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಪ್ರಸುತ್ತ ಇರುವ ರಸ್ತೆಯಲ್ಲಿ ಸೃಷ್ಟಿಯಾಗಿರುವ ಗುಂಡಿಗಳನ್ನು ಮುಚ್ಚಲು ಲಕ್ನೋದ ಹೊಸ ತಂತ್ರeನದ ಡ ಬಳಸಲಾಗುತ್ತಿದೆ ಎಂದು ಅಶೋಕ್ ರೈ ತಿಳಿಸಿದರು.
ವಿಟ್ಲ ಪೇಟೆ ರಸ್ತೆ ವಿಸ್ತರಣೆ ಜನರ ತೀರ್ಮಾನ
ವಿಟ್ಲ ಪೇಟೆ ವಿಸ್ತರಣೆಯನ್ನು ಒತ್ತಾಯಪೂರ್ವಕವಾಗಿ ಮಾಡುತ್ತಿಲ್ಲ. ಈಗ ಜಾಗ ಬಿಟ್ಟುಕೊಟ್ಟರೆ ಸೂಕ್ತ ಪರಿಹಾರ ಸಿಗುತ್ತದೆ. ಮುಂದೆ ಹಳೆಯ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ಕಟ್ಟುವಾಗ ಸೆಟ್‌ಬ್ಯಾಕ್ ಬಿಡುವುದು ಕಡ್ಡಾಯವಾಗುತ್ತದೆ. ಅಂತಿಮವಾಗಿ ಸಾರ್ವಜನಿಕರ ತೀರ್ಮಾನಕ್ಕೆ ಬದ್ಧವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ಹೇಳಿದರು.