ಜಿಲ್ಲೆ

ಕಾಮಗಾರಿಯಿಂದ ಹಾನಿಯಾಗುವ ಮನೆಗಳಿಗೆ ಪರಿಹಾರ - ಶಾಸಕ ಅಶೋಕ್ ರೈ ಭರವಸೆ - ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ

Mangaluru - Nishantha Narayana

ಪುತ್ತೂರು: ಉಪ್ಪಿನಂಗಡಿ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಹಾನಿಯಾಗುವ ಮನೆಗಳಿಗೆ ಪರಿಹಾರ ಒದಗಿಸಲಾಗುವುದು. ದೊಡ್ಡ ಗುಂಡಿಗಳಿಗೆ ವೆಟ್‌ಮಿಕ್ಸ್ ಹಾಕುವ ಜತೆಗೆ ಮಳೆ ನಿಂತರೆ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಗುಂಡಿಗಳನ್ನು ಮುಚ್ಚುವ ಕೆಲಸ ನಡೆಯಲಿದೆ. ಈಗಾಗಲೇ ಶಿಲಾನ್ಯಾಸ ಮಾಡಿದ ೧೫೦ ಕೋಟಿ ರೂ. ಕಾಮಗಾರಿ ಮುಂದಿನ ಮೂರು ನಾಲ್ಕು ದಿನದಲ್ಲಿ ಪ್ರಾರಂಭವಾಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಬೊಳುವಾರು ಜಂಕ್ಷನ್‌ನಲ್ಲಿ ಲೋಕೋಪಯೋಗಿ ಇಲಾಖೆಯ ಎಸ್. ಎಚ್. ಡಿ. ಪಿ. ಹಂತ ೫ರ ೨೦೨೩-೨೪ ಅನುದಾನದಡಿಯಲ್ಲಿ ಆಯ್ದಭಾಗದಲ್ಲಿ ೨೦ ಕೋಟಿ ರೂ. ವೆಚ್ಚದಲ್ಲಿ ನಡೆಯುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ನಗರಸಭೆ ಮಾಜಿ ಉಪಾಧ್ಯಕ್ಷ ಮಹಮ್ಮದ್ ಆಲಿ ಮಾತನಾಡಿ, ಪುತ್ತೂರಿಗೆ ಮಂಜೂರಾದ ಒಳಚರಂಡಿ ವ್ಯವಸ್ಥೆ ಬಿಜೆಪಿ ಆಡಳಿತದ ಕಾರ್ಯವೈಖರಿಯಿಂದ ಕೈಬಿಟ್ಟು ಹೋಗಿದೆ. ಈಗ ಮತ್ತೆ ಅದನ್ನು ಮಂಜೂರು ಮಾಡುವ ಕೆಲಸ ಶಾಸಕರು ಮಾಡುತ್ತಿದ್ದಾರೆ. ೧೧೩ ಕೋಟಿಯ ನಲ್ಲಿನೀರು ಯೋಜನೆ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹಳ್ಳಿಯ ಮೂಲೆ ಮೂಲೆಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ಬ್ಲಾಕ್ ಅಧ್ಯಕ್ಷರಾದ ಕೃಷ್ಣ ಪ್ರಸಾದ್ ಆಳ್ವ, ಪದ್ಮನಾಭ ಪೂಜಾರಿ, ಬ್ಲಾಕ್ ಮಾಜಿ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ, ಅಕ್ರಮ-ಸಕ್ರಮ ಸಮಿತಿಯ ಮಹಮ್ಮದ್ ಬಡಗನ್ನೂರು, ಮುಖಂಡರಾದ ಎಂ. ಎಸ್. ಮಹಮ್ಮದ್, ಮುರಳೀಧರ ರೈ ಮಠಂತಬೆಟ್ಟು, ಪ್ರವೀಣ್ ಚಂದ್ರ ಆಳ್ವ ಮತ್ತಿತರರು ಉಪಸ್ಥಿತರಿದರು.