oplus_0 
ಜಿಲ್ಲೆ

ಬಿಸಿಮುಟ್ಟಿಸಿದ ಉಪಲೋಕಾಯುಕ್ತ - ಸರ್ಕಾರಿ ಆಸ್ಪತ್ರೆ, ಹಾಸ್ಟೆಲ್ ಅವ್ಯವಸ್ಥೆ ನೋಡಿ ಗರಂ - ಕಳಪೆ ಉಪಕರಣಗಳನ್ನು ಬದಲಾಯಿಸಲು ಸೂಚನೆ

Mangaluru - Nishantha Narayana

ಪುತ್ತೂರು: ತಾಲೂಕು ಸರ್ಕಾರಿ ಆಸ್ಪತ್ರೆ, ಹಾರಾಡಿ ಸಮಾಜ ಕಲ್ಯಾಣ ಇಲಾಖಾ ವಿದ್ಯಾರ್ಥಿನಿಯರ ನಿಲಯ, ಬಿರುಮಲೆಯ ವಿದ್ಯಾರ್ಥಿ ನಿಲಯಕ್ಕೆ ಕರ್ನಾಟಕ ಉಪಲೋಕಾಯುಕ್ತ ವೀರಪ್ಪ ಬಿ. ಭಾನುವಾರ ದಿಢೀರ್ ಭೇಟಿ ನೀಡಿ ಸರ್ಕಾರಿ ಅಽಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಪುತ್ತೂರು ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆಯ ಸಂದರ್ಭದಲ್ಲಿ ಶಬ್ದ ಹೊರಡಿಸುವ ವಿದ್ಯುತ್ ಫ್ಯಾನ್‌ಗಳಿದ್ದು, ತುಕ್ಕು ಹಿಡಿದ ಉಪಕರಣಗಳು ರೋಗಿಗಳಿಗೆ ಸಮಸ್ಯೆಯಾಗುತ್ತಿರುವುದು ಕಾಣಿಸಿದೆ. ಶೌಚಗೃಹಗಳಲ್ಲಿ ಸ್ವಚ್ಛತೆ ಇಲ್ಲದಿರುವುದು, ವಿದೇಶಿ ಹಾಗೂ ಭಾರತೀಯ ಶೈಲಿಯ ಕಮೋಡ್‌ಗಳು ಕಳಪೆಯಾಗಿರುವುದು ಕಂಡು ಬಂದಿದೆ.

ಆಸ್ಪತ್ರೆಗಳಲ್ಲಿ ಕಳಪೆ ವಸ್ತುಗಳನ್ನು ಬಳಸಬಾರದು. ಎಲ್ಲವನ್ನೂ ತಕ್ಷಣ ಸರಿಪಡಿಸುವ ಕೆಲಸ ನಡೆಯಬೇಕು. ಶವಕ್ಕೆ ಗೌರವ ನೀಡಬೇಕು ಆದರೆ ಆಸ್ಪತ್ರೆಯ ಶವಾಗಾರ ಹಳೆಯದಾಗಿ ಒಡೆದ ಟೈಲ್ಸ್‌ಗಳು ಹಾಗೂ ಹಳೆಯ ಶೈಲಿಯ ಟೇಬಲ್‌ಗಳನ್ನು ಹೊಂದಿದೆ. ಇದನ್ನು ಗಮನಿಸಿ ತಕ್ಷಣ ಶವಾಗಾರವನ್ನು ಆಧುನೀಕರಣ ಮಾಡುವುದಕ್ಕೆ ಸೂಚನೆ ನೀಡಿದ್ದಾರೆ.

ಹಾರಾಡಿ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ವೇಳೆ ವಿದ್ಯಾರ್ಥಿನಿಯರಿಗೆ ಸರಿಯಾದ ಸಮಯಕ್ಕೆ ಊಟದ ವ್ಯವಸ್ಥೆ ಸಿಗದ ಬಗ್ಗೆ, ಹಾಸ್ಟೆಲ್ ಸುರಕ್ಷತೆಗಾಗಿ ಆವರಣ ಬೇಲಿ ಇಲ್ಲದಿರುವ ಬಗ್ಗೆ, ಗ್ಯಾಸ್ ಸಿಲಿಂಡರ್ ಇಡಲು ಪ್ರತ್ಯೇಕ ಕೊಠಡಿ ಇಲ್ಲದಿರುವ ಬಗ್ಗೆ ಹಾಗೂ ವಿದ್ಯಾರ್ಥಿನಿಯರಿಗೆ ಓದಲು ಸರಿಯಾದ ಲೈಬ್ರೆರಿ ವ್ಯವಸ್ಥೆ ಇಲ್ಲದರ ಬಗ್ಗೆ ವಿದ್ಯಾರ್ಥಿಗಳು ಲೋಕಾಯುಕ್ತರಿಗೆ ದೂರು ನೀಡಿದರು.

ಬಿರುಮಲೆ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿದರು. ವಿದ್ಯಾರ್ಥಿಗಳ ಬೇಡಿಕೆಯನ್ನು ಆಲಿಸಿದ ಅವರು ಸಮಸ್ಯೆಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. ಮಂಗಳೂರು ಲೋಕಾಯುಕ್ತ ಪೊಲೀಸ್ ಅಽಕ್ಷಕ ನಟರಾಜ್ ಎಂ.ಎ., ಉಪಅಽಕ್ಷಕಿ ಗಾನಾ ಪಿ. ಕುಮಾರ್, ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ, ಸುರೇಶ್, ಚಂದ್ರಶೇಖರ್ ಉಪಸ್ಥಿತರಿದ್ದರು.

ಸ್ವಯಂಪ್ರೇರಿತ ಪ್ರಕರಣದ ಎಚ್ಚರಿಕೆ

ತಾಲೂಕು ಆಸ್ಪತ್ರೆಯ ಶೌಚಗೃಹ ಹಾಗೂ ಸ್ನಾನಗೃಹದಲ್ಲಿ ಗುಣಮಟ್ಟವಿಲ್ಲದ ಉಪಕರಣಗಳಿರುವುದನ್ನು ಗಮನಿಸಿದ ಉಪಲೋಕಾಯುಕ್ತರು ಗರಂ ಆಗಿದ್ದಾರೆ. ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ಬಗ್ಗೆ ಸಿಡಿಮಿಡಿಗೊಂಡ ಉಪಲೋಕಾಯುಕ್ತರು ಹಾಸ್ಟೆಲ್ ವಾರ್ಡನ್ ಅವರನ್ನು ತರಾಟೆಗೆತ್ತಿಕೊಂಡರು. ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಹಾಸ್ಟೆಲ್‌ಗಳನ್ನು ಸರಿಯಾಗಿಟ್ಟುಕೊಳ್ಳದಿದ್ದಲ್ಲಿ, ಮಕ್ಕಳ ಸುರಕ್ಷತೆಯನ್ನು ಕಾಪಾಡುವಲ್ಲಿ ವಿಫಲವಾದರೆ ಸುಮೋಟೋ ಕೇಸು ದಾಖಲಿಸಿಕೊಳ್ಳುವುದಾಗಿ ಎಚ್ಚರಿಸಿದರು.

ಅಗತ್ಯ ಕ್ರಮಕ್ಕೆ ಸೂಚನೆ

ವಿದ್ಯಾರ್ಥಿನಿಯರ ಭದ್ರತೆಯ ದೃಷ್ಟಿಯಿಂದ ಹಾಸ್ಟೆಲ್‌ನ ಸುತ್ತಲೂ ಆವರಣಕ್ಕೆ ಬೇಲಿ ಹಾಕಿಸಬೇಕು. ವಿದ್ಯಾರ್ಥಿನಿಯರಿಗೆ ಅಗತ್ಯವಾದ ಊಟದ ವ್ಯವಸ್ಥೆಯನ್ನು ಸಮಕ್ಕೆ ಸರಿಯಾಗಿ ಮಾಡಬೇಕು. ಹಾಸ್ಟೆಲ್ ಗ್ರಂಥಾಲಯಕ್ಕೆ ಹೆಚ್ಚಿನ ಪಠ್ಯಪುಸ್ತಕ ತರುವಲ್ಲಿ ಕ್ರಮ ವಹಿಸಬೇಕು ಎಂದು ಸಂಬಂಧಪಟ್ಟ ಅಽಕಾರಿಗಳಿಗೆ ಫೋನ್ ಮೂಲಕ ಕರೆ ಮಾಡಿ ಸೂಚಿಸಿದರು. ಈ ಎಲ್ಲ ವ್ಯವಸ್ಥೆಯನ್ನು ಒಂದು ವಾರದ ಒಳಗೆ ಮಾಡದೆ ಹೋದಲ್ಲಿ ವಾರ್ಡನ್ ಸೇರಿದಂತೆ ಸಂಬಂಧಪಟ್ಟ ಅಽಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದರು.

ಅವ್ಯವಸ್ಥೆ ಹೊರ ಬಂದಿಲ್ಲ

ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ತಡವಾಗಿ ನಡೆಸುವುದು ಹಾಗೂ ಶವಾಗಾರದಲ್ಲಿ ಹಣದ ಬೇಡಿಕೆ ಇಡುವ ವಿಚಾರಗಳನ್ನು ಸಚಿವರ ಗಮನಕ್ಕೆ ಶನಿವಾರ ತರಲಾಗಿತ್ತು. ಮರಣೋತ್ತರ ಪರೀಕ್ಷೆಯನ್ನು ತಡವಾಗಿ ಮಾಡಿದ ವಿಚಾರದಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದವರ ವಿರುದ್ಧವೇ ಪ್ರಕರಣ ದಾಖಲಿಸಿದ ಬಗ್ಗೆ ತಿಳಿಸಲಾಗಿತ್ತು. ಈ ಎಲ್ಲ ಅವ್ಯವಸ್ಥೆಗಳನ್ನು ಉಪಲೋಕಾಯುಕ್ತರು ತಿಳಿದರೆ, ಶಿಸ್ತು ಕ್ರಮ ಕೈಗೊಳ್ಳಬಹುದೆಂದು ಸಾಧ್ಯವಾದಷ್ಟು ಅವ್ಯವಸ್ಥೆಗಳನ್ನು ಹೊರಬರದಂತೆ ನೋಡಿಕೊಳ್ಳಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.

ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಜನರಿಂದ ಅಹವಾಲುಗಳನ್ನು ಸ್ವೀಕರಿಸಲಾಗುತ್ತಿದ್ದು, ಪುತ್ತೂರು ಭೇಟಿ ಇದರ ಭಾಗವಾಗಿದೆ. ಪುತ್ತೂರಿನ ಸರ್ಕಾರಿ ಆಸ್ಪತ್ರೆ ಹಾಗೂ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಅರಿತುಕೊಳ್ಳಲಾಗಿದೆ. ಸರ್ಕಾರದ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ಅಽಕಾರಿಗಳಿಗೆ ಸೂಚನೆ ನೀಡಲಾಗುವುದು. ರಜೆಯ ಕಾರಣ ಇತರ ಇಲಾಖೆಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ.

| ವೀರಪ್ಪ ಬಿ. ಉಪಲೋಕಾಯುಕ್ತರು, ಕರ್ನಾಟಕ