ಜಿಲ್ಲೆ

ಜಂಗಲ್ ಕಟ್ಟಿಂಗ್‌ಗೆ ಅನುಮೋದನೆ- ಪುತ್ತೂರು ನಗರಸಭಾ ವ್ಯಾಪ್ತಿಗೆ 13 ಲಕ್ಷ ರೂ. ಅನುದಾನ

Shravan Kumar Nala

ಪುತ್ತೂರು: ಮಳೆಗಾಲ ಸಂದರ್ಭ ಪುತ್ತೂರು ನಗರಸಭಾ ವ್ಯಾಪ್ತಿಯ ರಸ್ತೆ ಹಾಗೂ ರಾಜಕಾಲುವೆಗಳ ಸುತ್ತ ಪೊದೆಗಳು, ಹುಲ್ಲು ತೆರವು ಮಾಡುವ ಜಂಗಲ್ ಕಟ್ಟಿಂಗ್ ಯೋಜನೆಗೆ ಅನುಮೋದನೆ ದೊರಕಿದೆ. ಇದಕ್ಕಾಗಿ ನಗರಸಭೆಯಿಂದ ಒಟ್ಟು 13 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಮಳೆಗಾಲದಲ್ಲಿ ನಗರಸಭೆಯ 31 ವಾರ್ಡ್‌ಗಳ ರಸ್ತೆಯ ಬದಿ ಪೊದೆ, ಹುಲ್ಲು ತೆರವು ಮಾಡಲು 13 ಲಕ್ಷ ರೂ. ಇರಿಸಿದ್ದು, ಅದರಲ್ಲಿ 1ರಿಂದ 10 ವಾರ್ಡ್‌ಗೆ 4 ಲಕ್ಷ, 11ರಿಂದ 20 ವಾರ್ಡ್‌ಗಳ ತನಕ 4 ಲಕ್ಷ, 21ರಿಂದ 31ರ ತನಕ 5 ಲಕ್ಷ ರೂ. ಅನುದಾನ ಇಡಲಾಗಿದೆ. ಇದಕ್ಕೆ ಇಷ್ಟು ಕಡಿಮೆ ಮೊತ್ತ ಸಾಕಾಗುವುದಿಲ್ಲ ಎಂದು ಬಹುತೇಕ ನಗರಸಭಾ ಸದಸ್ಯರು ಪೌರಾಯುಕ್ತರ ಬಳಿ ಅಳಲು ತೋಡಿಕೊಂಡಿದ್ದಾರೆ.
ನಗರಸಭೆ ವತಿಯಿಂದ ಕೈಗೊಳ್ಳುವ ಸ್ವಚ್ಛತೆ, ಜಂಗಲ್ ಕಟ್ಟಿಂಗ್, ಮೋರಿ ಕೆಲಸ ಸೇರಿದಂತೆ ಹಲವು ಕಾಮಗಾರಿಗಳನ್ನು ಗುತ್ತಿಗೆದಾರರು ವರ್ಕ್ ಆರ್ಡರ್ ಸಿಕ್ಕ ಕೂಡಲೇ ಬೇಕಾಬಿಟ್ಟಿಯಾಗಿ ಮಾಡುತ್ತಾರೆ ಎಂಬ ಆರೋಪವಿದೆ. ಜಂಗಲ್ ಕಟ್ಟಿಂಗ್ ಕಾರ್ಮಿಕರು ಬಹುತೇಕ ಕಡೆ ಪೊದೆ, ಹುಲ್ಲು ಅರ್ಧಂಬರ್ಧ ತೆರವು ಮಾಡುತ್ತಾರೆ. ಅಪೂರ್ಣ ಕಾಮಗಾರಿ ಬಗ್ಗೆ ನಗರಸಭೆಗೆ ಮಾಹಿತಿ ನೀಡಿದರೂ ಕಾರ್ಮಿಕರಿಗೆ ಕೂಲಿ ನೀಡಲಾಗುತ್ತದೆ. ಅದಕ್ಕಾಗಿ ಮುಂದೆ ಯಾವುದೇ ಕೆಲಸ ಮಾಡುವಾಗ ಸ್ಥಳೀಯ ಸದಸ್ಯರಿಗೆ ಗುತ್ತಿಗೆದಾರರು ಮಾಹಿತಿ ನೀಡುವಂತೆ ತಿಳಿಸಲಾಗಿದೆ.
ಪೌರಕಾರ್ಮಿಕರಿಂದ ಕಾರ್ಯ
ಮುಖ್ಯರಸ್ತೆಯಲ್ಲಿ ಜಂಗಲ್ ಕಟ್ಟಿಂಗ್ ಅನ್ನು ಪೌರಕಾರ್ಮಿಕರೇ ನಿರ್ವಹಿಸುವಂತೆ ಸೂಚಿಸಲಾಗಿದೆ. ಪೌರಕಾರ್ಮಿಕರ 100 ಹುದ್ದೆಗಳು ಇಲ್ಲಿಗೆ ಮಂಜೂರಾಗಿದ್ದರೂ, ಪ್ರಸ್ತುತ 11 ಹುದ್ದೆಗಳಷ್ಟೇ ಭರ್ತಿಯಾಗಿದ್ದು, ನಗರ ಸ್ವಚ್ಛತೆ, ಗುಡಿಸುವಿಕೆ, ಗಿಡಗಳ ಕಟ್ಟಿಂಗ್ ಮುಂತಾದ ಕೆಲಸಗಳಿಗೆ ತಾತ್ಕಾಲಿಕ ನೆಲೆಯಲ್ಲಿ 44 ಕಾರ್ಮಿಕರಿದ್ದಾರೆ. 35 ಹೆಚ್ಚುವರಿ ನೇಮಕಾತಿಗೆ ಜಿಲ್ಲಾಧಿಕಾರಿಯಿಂದ ಅನುಮತಿ ಕೇಳಲಾಗಿದ್ದರೂ ಅನುಮೋದನೆ ಸಿಕ್ಕಿಲ್ಲ. ತಾತ್ಕಾಲಿಕ ನೆಲೆಯಲ್ಲಿ 44 ಕಾರ್ಮಿಕರು ಪ್ರಮುಖ ಸ್ಥಳಗಳಲ್ಲಿ ಜಂಗಲ್ ಕಟ್ಟಿಂಗ್ ಕೆಲಸ ಮಾಡುವಂತೆ ನಗರಸಭೆಯಿಂದ ಸೂಚನೆ ಇದೆ.

ನಗರಸಭೆಯ 31 ವಾರ್ಡ್‌ಗಳಲ್ಲಿ ಪೊದೆ, ಹುಲ್ಲು ತೆರವಿಗೆ 13 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಜಂಗಲ್ ಕಟ್ಟಿಂಗ್ ಮಾಡುವ ಗುತ್ತಿಗೆದಾರರು ಸ್ಥಳೀಯ ಸದಸ್ಯರಿಗೆ ಮಾಹಿತಿ ನೀಡಬೇಕು ಎಂಬ ನಿಯಮ ರೂಪಿಸಲಾಗಿದೆ. ಮಳೆ ನಿಂತ ಕೂಡಲೇ ಜಂಗಲ್ ಕಟ್ಟಿಂಗ್ ಕೆಲಸ ಮಾಡಲು ಸೂಚಿಸಿದೆ.
ಜೀವಂಧರ್ ಜೈನ್
ಪುತ್ತೂರು ನಗರಸಭಾ ಅಧ್ಯಕ್ಷ