ಜಿಲ್ಲೆ

ಮಕ್ಕಳ ಭವಿಷ್ಯದ ಕಾಳಜಿ ಪಾಲಕರಿಗಿರಲಿ - ಎ. ಜಗಜೀವನ್ ದಾಸ್ ರೈ ಸಲಹೆ - ಫಿಲೋಮಿನಾದಲ್ಲಿ ಶೈಕ್ಷಣಿಕ ವರ್ಷ ಉದ್ಘಾಟನೆ

Mangaluru - Nishantha Narayana

ಪುತ್ತೂರು: ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಕೂಡ ಕಾಳಜಿ ವಹಿಸಬೇಕು ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ವಿಜಯ ಬ್ಯಾಂಕ್‌ನ ನಿವೃತ್ತ ಸಹಾಯಕ ಮುಖ್ಯ ವ್ಯವಸ್ಥಾಪಕ ಎ. ಜಗಜೀವನ್ ದಾಸ್ ರೈ ಹೇಳಿದರು.

ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪ. ಪೂ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡಿರುವುದು ಸಂತೋಷ. ಆದರೆ ಆ ಸಾಧನೆ ಇಲ್ಲಿಗೆ ಸೀಮಿತವಾಗದೆ ನಿರಂತರವಾಗಿರಬೇಕು ವಿಶೇಷ ಸಾಧಕರಾಗಿ ದೇಶಕ್ಕೆ ಕೊಡುಗೆಯಾಗಿ, ಸಮಾಜಕ್ಕೆ ಆಸ್ತಿಯಾಗಿರಿ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಯ ಸಂಚಾಲಕ ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ವಿದ್ಯಾರ್ಥಿಗಳು ಸಾಧನೆಯ ಗುರಿಯೊಂದಿಗೆ ಸಂಕಲ್ಪ ಮಾಡಬೇಕು. ಮನಸ್ಸಿದ್ದರೆ ನಾವು ಅಂದುಕೊಂಡಿದ್ದನ್ನು ಸಾಽಸಬಹುದು. ವಿದ್ಯಾರ್ಥಿ ಜೀವನ ಎಂಬುದು ಬದುಕಲ್ಲಿ ಬರುವ ಅತ್ಯಂತ ಅಮೂಲ್ಯ ಮತ್ತು ಸುಂದರವಾದ ಸಮಯ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ ಕೋಸ್ಟ, ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪ್ರತಿಮಾ ಹೆಗ್ಡೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

೨೦೨೩-೨೪ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ೮ನೇ ಸ್ಥಾನ ಪಡೆದ ಪಿ ಹಲಿಮತ್ ಶೈಮಾ, ೧೦ನೇ ಸ್ಥಾನ ಪಡೆದ ಪ್ರವನ್ ಪೊನ್ನಪ್ಪ ಎಂ ಎನ್, ವಾಣಿಜ್ಯ ವಿಭಾಗದಲ್ಲಿ ೧೦ನೇ ಸ್ಥಾನ ಪಡೆದ ಪ್ರತೀಕ್ಷಾ ಡಿ.ಎಸ್ ಇವರನ್ನು ಸನ್ಮಾನಿಸಲಾಯಿತು. ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ೧೯೦ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಎಸ್ .ಎಸ್. ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕವನ್ನು ಪಡೆದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಅಪೂರ್ವ ಅವರನ್ನು ಗೌರವಿಸಲಾಯಿತು.

ಕಾಲೇಜಿನ ವಾರ್ಷಿಕ ಸಂಚಿಕೆ ’ಫಿಲೋ ದರ್ಶನ’ ಮತ್ತು ಕಾಲೇಜ್ ವೆಬ್‌ಸೈಟ್ ಅನಾವರಣಗೊಳಿಸಲಾಯಿತು. ಉಪನ್ಯಾಸಕಿ ಫಿಲೋಮಿನಾ ಮೊಂತೆರೋ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಅಶೋಕ್ ರಾಯನ್ ಕ್ರಾಸ್ತಾ ಪ್ರಾಸ್ತಾವನೆಗೈದರು. ಉಪನ್ಯಾಸಕಿ ರೇಖಾ ವಂದಿಸಿದರು. ಸುಮಾ ಡಿ. ಕಾರ್ಯಕ್ರಮ ನಿರೂಪಿಸಿದರು.