ಪುತ್ತೂರು: ಕೊಂಬೆಟ್ಟು ತಾಲೂಕು ಕ್ರೀಡಾಂಗಣ ಕೊಂಬೆಟ್ಟಿನಲ್ಲಿ ಶನಿವಾರ ದಸರಾ ಗ್ರಾಮೀಣ ಕ್ರೀಡಾಕೂಟದ ಆಯೋಜನೆ ಮಾಡಲಾಗಿದ್ದು, ತಾಲೂಕಿನ ಯುವಕ ಹಾಗೂ ಯುವತಿ ಮಂಡಲಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಗ್ರಾಮೀಣ ಭಾಗದ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಬೇಕಾಗಿದ್ದ ಕ್ರೀಡಾಕೂಟ ಕೇವಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಕೂಟವಾಗಿ ಬದಲಾಗಿದೆ.
ಈ ಮೊದಲು ದಸರಾ ಗ್ರಾಮೀಣ ಕ್ರೀಡಾಕೂಟದ ಬಗ್ಗೆ ಗ್ರಾಮೀಣ ಭಾಗದ ಯುವಕ-ಯುವತಿ ಮಂಡಲಗಳಿಗೆ ಮಾಹಿತಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಲಾಗಿತ್ತು. ಇದಕ್ಕಾಗಿ ತಾಲೂಕು ಪಂಚಾಯಿತಿ ಯುವಜನಸೇವಾ ಕ್ರೀಡಾ ಸಂಘ ಹಾಗೂ ಶಿಕ್ಷಕರ ನೆರವನ್ನು ಪಡುಕೊಳ್ಳಲಾಗಿತ್ತು. ಆದರೆ ಈ ಬಾರಿ ಇದೆಲ್ಲದಕ್ಕೂ ತಿಲಾಂಜಲಿಯನ್ನು ನೀಡಿ ದಸರಾ ಕ್ರೀಡಾಕೂಟವನ್ನು ಕಾಟಾಚಾರಕ್ಕಾಗಿ ಮಾಡಿ ಮುಗಿಸಲಾಗಿದೆ ಎಂದು ಆರೋಪ ಕೇಳಿ ಬರುತ್ತಿದೆ.
ಯುವಜನಸೇವಾ ಇಲಾಖೆಯ ನೇತೃತ್ವದಲ್ಲಿ ಆಯೋಜನೆ ಮಾಡಲಾದ ಈ ದಸರಾ ಗ್ರಾಮೀಣ ಕ್ರೀಡಾಕೂಟದಲ್ಲಿ ಗ್ರಾಮೀಣ ಪ್ರತಿಭೆಗಳ ಬದಲಾಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಕೂಟವಾಗಿ ಬದಲಾಗಿತ್ತು. ಕಾಲೇಜು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಬೇಕಾಗಿದ್ದರೆ, ಯುವಕ ಮಂಡಲದ ಹೆಸರನ್ನು ಕಡ್ಡಾಯವಾಗಿ ನೀಡಬೇಕಾಗಿತ್ತು. ಆದರೆ ಈ ಬಾರಿ ಕಾಲೇಜು ಹೆಸರಿನಲ್ಲೇ ಭಾಗವಹಿರುವುದು ಅಚ್ಚರಿಗೆ ಕಾರಣವಾಗಿದೆ.
ದಸರಾ ಕ್ರೀಡಾಕೂಟವನ್ನು ರಾಜ್ಯಮಟ್ಟದಲ್ಲೇ ನಡೆಸುವ ಬಗ್ಗೆ ಮಾತುಕತೆಗಳು ನಡೆದು, ಸೆ.೧೩ಕ್ಕೆ ಯುವಜನ ಕ್ರೀಡಾ ಇಲಾಖೆಗೆ ದಸರಾ ಕ್ರೀಡಾಕೂಟ ನಡೆಸುವಂತೆ ಸರ್ಕಾರ ಸುತ್ತೂಲೆಯನ್ನು ಹೊರಡಿಸಿದೆ. ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆಯಿಂದ ನಲುಗುತ್ತಿರುವ ಇಲಾಖೆ ಸ್ಥಳೀಯ ದೈಹಿಕ ಶಿಕ್ಷಣ ಶಿಕ್ಷಕರ ನೆರವಿನಲ್ಲಿ ಕ್ರೀಡಾಕೂಟದ ಆಯೋಜನೆಗೆ ಮುಂದಾಗಿದೆ. ಇದರ ಜತೆಗೆ ಕ್ರೀಡಾಂಗಣಗಳೂ ಬೇರೆ ಕಾರ್ಯಕ್ರಮಗಳಿಗೆ ಆಯೋಜನೆ ಆಗಿರುವುದು ಇಲಾಖೆಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಎಲ್ಲೆಲ್ಲೂ ರಾಚಿದ ಅವ್ಯವಸ್ಥೆ
ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಆಯೋಜನೆಗೊಂಡ ಏಕ ದಿನದ ಈ ದಸರಾ ಕ್ರೀಡಾಕೂಟ ಅವ್ಯವಸ್ಥೆಯ ಆಗರವಾಗಿತ್ತು. ಕ್ರೀಡಾಂಗಣದಲ್ಲಿ ಹೈಜಂಪ್ ಹಾಗೂ ಲಾಂಗ್‌ಜಂಪ್‌ಗೆ ಸಮತಟ್ಟು ಮಾಡಿ ಸಿದ್ಧಪಡಿಸಿಲ್ಲ. ಖೋ-ಖೋ ಅಂಗಣದಲ್ಲಿ ಹೊಂಡ ಗುಂಡಿಗಳೇ ತುಂಬಿತ್ತು. ಓಟದ ಟ್ರ್ಯಾಕ್ ಎಲ್ಲಿದೆ ಎಂದು ಹುಡುಕಿ ಓಡುವ ಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಅವ್ಯವಸ್ಥೆಯಲ್ಲೂ ಕ್ರೀಡಾಕೂಟ ಆಯೋಜನೆಯ ಅಗತ್ಯ ಇತ್ತಾ ಎಂಬ ಪ್ರಶ್ನೆ ಮೂಡುವಂತಿತ್ತು.
ಹಣ ಮುಗಿಸುವ ವ್ಯವಸ್ಥೆ
ಯುವಜನ ಸೇವಾ ಕ್ರೀಡಾ ಇಲಾಖೆಯಿಂದ ಪುತ್ತೂರಿಗೆ ಸರಿಯಾದ ಅಽಕಾರಿ ಇಲ್ಲದೆ ಸ್ಥಳೀಯ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಿಗೆ ಜವಾಬ್ದಾರಿಯನ್ನು ನೀಡಲಾಗಿದೆ. ಜವಾಬ್ದಾರಿ ವಹಿಸಿಕೊಂಡವರು ಸರಿಯಾದ ಮಾಹಿತಿಯಿಲ್ಲದೆ, ಶಾಲೆಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಮಾಡಿದ್ದಾರೆ. ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವನ್ನು ಬೇಕಾಬಿಟ್ಟಿಯಾಗಿ ನಡೆಸಿದ ಕುಖ್ಯಾತಿಗೆ ಈ ಬಾರಿ ಯುವಜನಸೇವಾ ಕ್ರೀಡಾ ಇಲಾಖೆ ಒಳಗಾಗಿದೆ. ಇದೇ ತಾಲೂಕು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಯಾವುದೇ ಕೊರತೆ ಇಲ್ಲದೆ ಎರಡು ದಿನಗಳ ಕಾಲ ದಸರಾ ಹಾಗೂ ಗ್ರಾಮೀಣ ಕ್ರೀಡಾಕೂಟ ನಡೆಸಿ ಯಶಸ್ಸು ಪಡೆದಿದ್ದ ಇಲ್ಲಿನ ಸಂಘಟಕರ ಸಾಧನೆಗೆ ಈ ಬಾರಿಯ ಕ್ರೀಡಾಕೂಟ ‘ಕಪ್ಪುಚುಕ್ಕೆ’ ಯಾಯಿತು.
ಶಾಸಕರು ಭಾಗಿ!
ಕ್ರೀಡಾಕೂಟದಲ್ಲಿ ರಾಜಕೀಯದವರನ್ನು ತೊಡಗಿಸಿಕೊಳ್ಳಬಾರದೆಂಬ ಸೂಚನೆಗಳಿದೆ. ಪುತ್ತೂರು ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಭಾಗವಹಿಸಿದರು.
ಕ್ರೀಡಾಂಗಣಗಳು ಕೂಡಾ ಸರಿಯಾಗಿ ಸಿಗುತ್ತಿಲ್ಲ, ದೈಹಿಕ ಶಿಕ್ಷಣ ಶಿಕ್ಷಕರೂ ಬೇರೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಯುವಕ-ಯುವತಿ ಮಂಡಲದ ಅಧ್ಯಕ್ಷರ ಸಮ್ಮುಖದಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಸೆ.೨೬ಕ್ಕೆ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ನಡೆಸಲಾಗುತ್ತಿದೆ. ಆ ಬಳಿಕ ೮ ಜಿಲ್ಲೆಗಳನ್ನು ಸೇರಿಸಿಕೊಂಡು ವಿಭಾಗ ಮಟ್ಟದ ಕಾರ್ಯಕ್ರಮದ ೬ ಕ್ರೀಡೆಗಳನ್ನು ಮಡುವ ಜವಾಬ್ದಾರಿಯನ್ನು ಮಂಗಳೂರಿಗೆ ನೀಡಲಾಗಿದೆ. ಅ.೩ರಿಂದ ರಾಜ್ಯಮಟ್ಟದ ಕ್ರೀಡಾಕೂಟ ನಡೆಯಲಿದೆ.
| ಪ್ರದೀಪ್ ನಿರ್ದೇಶಕರು, ಯುವಕಜನ ಕ್ರೀಡಾ ಇಲಾಖೆ