ಪುತ್ತೂರು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಸದಾನಂದ ನಾಗಪ್ಪ ನಾಯ್ಕ ನೇತೃತ್ವದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಸಭೆ ನಡೆಯಿತು. ನ್ಯಾಯಾಧೀಶರಾದ ಸುಮಂಗಲಾ, ದೇವರಾಜ್ ವೈ.ಎಚ್., ಆರ್.ರಮ್ಯಾ ಇತರರು ಇದ್ದರು.
- ಜಡ್ಜ್ ಸದಾನಂದ ನಾಗಪ್ಪ ನಾಯ್ಕ ಹೇಳಿಕೆ
- ರಾಷ್ಟ್ರೀಯ ಲೋಕ ಆದಾಲತ್ ಪೂರ್ವಭಾವಿ ಸಭೆ
ಪುತ್ತೂರು: ಅದಾಲತ್‌ನಲ್ಲಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥ ಮಾಡಲು ಪ್ರಯತ್ನಿಸಬೇಕು. ಕುಟುಂಬ ಸದಸ್ಯರ ನಡುವಿನ ಕಲಹಗಳು ಬೇರೆಯೇ ರೂಪ ಪಡೆದುಕೊಂಡು ನ್ಯಾಯಾಲಯಕ್ಕೆ ಬರುತ್ತಿವೆ. ಇಂತಹ ಪ್ರಕರಣಗಳನ್ನು ಗುರುತಿಸಿ ಶೀಘ್ರ ಇತ್ಯರ್ಥಗೊಳಿಸಬೇಕು. ಜಾಗದ ತಕರಾರುಗಳನ್ನು ರಾಜಿ ಮೂಲಕ ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಪುತ್ತೂರು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ, ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಹೇಳಿದರು.
ಪುತ್ತೂರು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಭಾಂಗಣದಲ್ಲಿ ಜು.೧೧ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿಯಾಗಿ ಸೋಮವಾರ ವಿವಿಧ ಇಲಾಖೆಗಳ ಪ್ರಮುಖರ ಸಭೆಯನ್ನುದ್ದೇಶಿ ಮಾತನಾಡಿದರು.
೭ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶೆ ಸುಮಂಗಲಾ ಮತಾನಾಡಿ, ಸರ್ಕಾರದ ಮಟ್ಟದ ಹಲವು ಪ್ರಕರಣಗಳಿದ್ದು, ಅವುಗಳ ಇತ್ಯರ್ಥಕ್ಕೆ ಅದಾಲತ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಬ್ಯಾಂಕ್ ಪ್ರಕರಣಗಳಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲದ ಪ್ರಕರಣ ರಾಜಿಗೆ ಮುಂದೆ ಬರಬೇಕಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಇತ್ಯರ್ಥವಾದರೆ, ಆದಾಲತ್‌ನ ಉದ್ದೇಶ ಯಶಸ್ವಿಯಾಗುತ್ತದೆ ಎಂದರು.
ಪುತ್ತೂರು ನ್ಯಾಯಾಧೀಶರಾದ ದೇವರಾಜ್ ವೈ.ಎಚ್., ಆರ್.ರಮ್ಯಾ, ತಹಸೀಲ್ದಾರ್ ಎಸ್.ಬಿ.ಕೂಡಲಗಿ, ಪೌರಾಯುಕ್ತೆ ವಿದ್ಯಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ, ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಯದುರಾಜ್, ಪೊಲೀಸ್ ಉಪನಿರೀಕ್ಷಕ ಸುರೇಶ್ ಮತ್ತಿತ್ತರರು ಉಪಸ್ಥಿತರಿದ್ದರು.