ಬೊಳುವಾರು- ಹಾರಾಡಿ ರಸ್ತೆ ಕಾಮಗಾರಿ ಸಮಸ್ಯೆ ಪರಿಶೀಲಿಸಲು ಬಿಜೆಪಿ ನಿಯೋಗ ಸ್ಥಳಕ್ಕೆ ಭೇಟಿ ನೀಡಿತು. ಮಾಜಿ ಶಾಸಕ ಸಂಜೀವ ಮಠಂದೂರು, ಲೀಲಾವತಿ ಅಣ್ಣು ನಾಯ್ಕ, ಜೀವಂಧರ್ ಜೈನ್ ಇತರರು ಇದ್ದರು.
- ಬಿಜೆಪಿ ನಿಯೋಗದಿಂದ ಬೊಳುವಾರು- ಹಾರಾಡಿ ರಸ್ತೆ ಸಮಸ್ಯೆ ಪರಿಶೀಲನೆ
ಪುತ್ತೂರು: ಬೊಳುವಾರು- ಹಾರಾಡಿ ರಸ್ತೆ ಕಾಂಕ್ರೀಟ್ ಕಾಮಗಾರಿಯಿಂದ ಉಂಟಾಗಿರುವ ಸಮಸ್ಯೆ ಪರಿಶೀಲಿಸಲು ಪುತ್ತೂರು ಬಿಜೆಪಿ ನಿಯೋಗ ಸ್ಥಳಕ್ಕೆ ಭೇಟಿ ನೀಡಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯಿತು. ಸಾರ್ವಜನಿಕರಿಗೆ ತೊಂದರೆಯಾಗದಂತೆ ತಿಂಗಳೊಳಗೆ ಕಾಮಗಾರಿ ಮುಗಿಸಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಲೋಕೋಪಯೋಗಿ ಇಲಾಖೆಯ ಎಇಇ ರಾಜೇಶ್ ರೈ ಅವರೊಂದಿಗೆ ಮಾತುಕತೆ ನಡೆಸಿ, ಕಾಮಗಾರಿಯ ಗೊಂದಲದಿಂದಾಗಿ ಸ್ಥಳೀಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಜನಸಂಚಾರ ಇಲ್ಲದೆ ಆಟೋ ಚಾಲಕರಿಗೆ ಬಾಡಿಗೆ ಇಲ್ಲದಂತಾಗಿದ್ದು, ವರ್ತಕರಿಗೂ ವ್ಯಾಪಾರವಾಗುತ್ತಿಲ್ಲ. ವೃತ್ತ ನಿರ್ಮಾಣಕ್ಕೆ ಡಿಪಿಆರ್ ಮಾಡದೆ ಕಾಮಗಾರಿ ನಡೆಸುತ್ತಿರುವುದರಿಂದ ದೊಡ್ಡ ಲಾರಿಗಳು ತಿರುವು ಪಡೆಯಲಾಗುತ್ತಿಲ್ಲ ಎಂದರು.
ನಗರಸಭೆ ಮಾಜಿ ಅಧ್ಯಕ್ಷರಾದ ಲೀಲಾವತಿ ಅಣ್ಣು ನಾಯ್ಕ, ಜೀವಂಧರ್ ಜೈನ್, ಪಕ್ಷದ ಪ್ರಮುಖರಾದ ರಾಜೇಶ್ ಬನ್ನೂರು, ವಿದ್ಯಾಗೌರಿ, ಪ್ರಸನ್ನ ದರ್ಬೆ, ಸತೀಶ್ ನಾಯ್ಕ್ ದರ್ಬೆ, ಶಶಿಧರ್ ನಾಯಕ್, ಶಿವಕುಮಾರ್ ಪಿ.ಬಿ., ನಾಗೇಂದ್ರ ಬಾಳಿಗ, ನಿರಂಜನ್ ಮಾನ್ಯ, ಸಾಜ ರಾಧಾಕೃಷ್ಣ ಆಳ್ವ, ಬೂಡಿಯಾರ್ ರಾಧಾಕೃಷ್ಣ ರೈ, ವಿರೂಪಾಕ್ಷ ಮಚ್ಚಿಮಲೆ, ಯುವರಾಜ ಪೆರಿಯತ್ತೋಡಿ, ಹರಿಪ್ರಸಾದ್ ಯಾದವ್, ರಾಜೇಶ್ ಪರ್ಪುಂಜ, ವಿಶ್ವನಾಥ ಗೌಡ ಬನ್ನೂರು, ಲಕ್ಷ್ಮಣ್ ಕೋಡಿಂಬಾಡಿ, ಪುರುಷೋತ್ತಮ ಮುಂಗ್ಲಿಮನೆ, ಮುರಳೀಕೃಷ್ಣ ಹಸಂತಡ್ಕ ಇದ್ದರು.
"
ರಾಜ್ಯ ಹೆದ್ದಾರಿಯ ಬೊಳುವಾರು ಭಾಗದ ೧.೮೦ ಕಿ.ಮೀ. ಕಾಂಕ್ರೀಟ್ ಕಾಮಗಾರಿ ಕಳೆದ ಡಿಸೆಂಬರ್‌ನಲ್ಲೇ ಮುಗಿಯಬೇಕಿತ್ತು. ಅವಧಿ ಮುಗಿದು ೮ ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ. ರಸ್ತೆ ಕಾಮಗಾರಿಯ ಅವ್ಯವಸ್ಥೆಯಿಂದ ಜನರು, ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬಿಜೆಪಿ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಪಡಿಸುವುದಿಲ್ಲ. ಕಾಮಗಾರಿ ವೇಗ ಪಡೆಯದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದೇವೆ.
— ಸಂಜೀವ ಮಠಂದೂರು, ಮಾಜಿ ಶಾಸಕ