ಪುತ್ತೂರು: ಬಿಜೆಪಿ ನಾಯಕನ ಪುತ್ರನಿಂದ ತೀವ್ರ ಮುಜುಗರಕ್ಕೊಳಗಾದ ಪಕ್ಷಕ್ಕೆ ತಾಪಂ ಮಾಜಿ ಸದಸ್ಯೆಯ ಪಕ್ಷಾಂತರ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅರಿಯಡ್ಕ ಕ್ಷೇತ್ರವನ್ನು ಪ್ರತಿನಿಧಿಸಿದ್ದ ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ರೇಖಾ ನಾಗರಾಜ್, ಬಡಗನ್ನೂರು ಗ್ರಾಮದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಬೆಂಬಲಿಗರ ಜತೆಗೆ ಆಗಮಿಸಿದ್ದಲ್ಲದೆ, ಕಾಂಗ್ರೆಸ್ ಪಕ್ಷದ ಧ್ವಜ ಕೈಯಲ್ಲಿ ಹಿಡಿದು ಫೋಟೊಗೆ ಫೋಸ್ ಕೂಡಾ ಕೊಟ್ಟಿದ್ದರು. ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಪ್ರಕಟಿಸಲಾಗಿತ್ತು.
ಮುಂದಿನ ಡಿಸೆಂಬರ್ ತಿಂಗಳಿಗೆ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಅವಧಿ ಕೊನೆಗೊಳ್ಳಲಿದ್ದು, ಇದರ ಜತೆಗೆ ೪ ವರ್ಷಗಳ ಹಿಂದೆಯೇ ನಡೆಯಬೇಕಾದ ತಾಪಂ, ಜಿಪಂ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ. ಪಕ್ಷಗಳ ಬಲವರ್ಧನೆ ಮಾಡಿಕೊಳ್ಳುವ ಕಾಲದಲ್ಲಿ ತಾ.ಪಂ. ಮಾಜಿ ಸದಸ್ಯೆಯ ಪಕ್ಷಾಂತರ ಬಿಜೆಪಿಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.
ರಾತ್ರೋ ರಾತ್ರಿ ಮತ್ತೆ ಬಿಜೆಪಿಗೆ!
ವಿಷಯ ತಿಳಿದು ರೇಖಾ ನಾಗರಾಜ್ ಮನೆಗೆ ರಾತೋರಾತ್ರಿ ಮುಖಂಡರ ತಂಡ ದೌಡಾಯಿಸಿದ್ದು, ಇದರಿಂದ ರೇಖಾ ನಾಗರಾಜ್ ‘ಯುಟರ್ನ್’ಗೆ ಮನಸ್ಸು ಮಾಡಿದ್ದಾರೆ. ಗುರುವಾರ ಬಿಜೆಪಿ ಕಚೇರಿಯಲ್ಲಿ ರೇಖಾ ನಾಗರಾಜ್ ಹೇಳಿಕೆ ನೀಡಿದ್ದು, ತಾನು ತನ್ನ ಮಗನ ವಿಚಾರ ಮಾತನಾಡಲು ಹೋದಾಗ ತನ್ನ ಕೈಗೆ ಕಾಂಗ್ರೆಸ್ ಧ್ವಜ ಕೊಟ್ಟು ಫೋಟೋ ಕ್ಲಿಕ್ಕಿಸಿ ಕಾಂಗ್ರೆಸ್ ಸೇರ್ಪಡೆ ಎಂದು ಬಿತ್ತರಿಸಿದ್ದಾರೆ. ನಾನು ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದು ಸುಳ್ಳು ಎಂದಿದ್ದಾರೆ.
ವಿಡಿಯೋ ಸಾಕ್ಷಿ ಬಿಡುಗಡೆ!
ಕಾಂಗ್ರೆಸ್ ಸೇರ್ಪಡೆ ಸುಳ್ಳು ಎನ್ನುತ್ತಿದ್ದಂತೆ ರೇಖಾ ನಾಗರಾಜ್ ಸಹಿತ ೯ ಮಂದಿ ಕಾಂಗ್ರೆಸ್ ಸೇರ್ಪಡೆ ಎಂದು ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದಾಗ ವೇದಿಕೆಗೆ ಬಂದು ಪಕ್ಷದ ಧ್ವಜ ಹಿಡಿದು ನಿಂತ ವಿಡಿಯೋವನ್ನು ಸಾಕ್ಷಿಯಾಗಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ಮೂಲಕ ಬಿಜೆಪಿ ಮಾಜಿ ಶಾಸಕ ನಡೆಸಿದ ಪ್ರಹಸನಕ್ಕೆ ತಿರುಗೇಟು ನೀಡಿದೆ.