ಕೊಂಬೆಟ್ಟು ಶಾಲೆಯಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನದ ಜತೆಗೆ ಅರುಣ್‌ ಕುಮಾರ್‌. 
ಜಿಲ್ಲೆ

ಸರ್ಕಾರಿ ಶಾಲೆಯಲ್ಲಿ ಬಯೋಮೆಟ್ರಿಕ್‌ PUTTUR

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಹಳೇ ವಿದ್ಯಾರ್ಥಿಯೇ ಅಭಿವೃದ್ಧಿಪಡಿಸಿದ ತಂತ್ರಜ್ಞಾನ
  • ಕೊಂಬೆಟ್ಟುವಿನಲ್ಲಿ ಅನುಷ್ಠಾನ
ಪುತ್ತೂರು: ಶಾಲಾ ಮಕ್ಕಳ ಸುರಕ್ಷತೆಗಾಗಿ ಮಕ್ಕಳು ಶಾಲೆಗೆ ತಲುಪಿದ ಸಂದೇಶ ಪಾಲಕರ ಮೊಬೈಲ್‌ಗೆ ರವಾನೆಯಾಗುವಂತಹ ಸೂಪರ್‌ ಬಯೋಮೆಟ್ರಿಕ್‌ ವ್ಯವಸ್ಥೆಯನ್ನು ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿ ಅರುಣ್‌ ಕುಮಾರ್‌ ಅಭಿವೃದ್ಧಿಪಡಿಸಿದ್ದಾರೆ. ಅವರ ಈ ಸಾಧನೆಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ದೊರೆತಿದ್ದು, ರಾಜ್ಯ ಸರ್ಕಾರ ನಗದು ಬಹುಮಾನ ನೀಡಿದೆ. ಶಿಕ್ಷಣ ಇಲಾಖೆ ವಿದ್ಯಾರ್ಥಿ ಸಾಧನೆಯನ್ನು ಶ್ಲಾಘಿಸಿದೆ.
ಮಕ್ಕಳು ಶಾಲೆಗೆ ಹೋಗುವುದಾಗಿ ಹೇಳಿ ಬೇರೆಕಡೆ ಹೋದರೆ ಪಾಲಕರ ಕೈಗೆ ಸಿಕ್ಕಿಬೀಳುವ ವ್ಯವಸ್ಥೆಯನ್ನು ಅರುಣ್‌ ಕುಮಾರ್‌ ಅಭಿವೃದ್ಧಿಪಡಿಸಿದ್ದಾರೆ. ಇದರಲ್ಲಿ ಶಾಲೆಯಲ್ಲಿ ಕ್ಯಾಮರಾ ಹಾಗೂ ಬಯೋಮೆಟ್ರಿಕ್‌ ವ್ಯವಸ್ಥೆಯ ಮೂಲಕ ಹಾಜರಾತಿ ದಾಖಲಾಗಿ, ಈ ಸಂದೇಶ ಪಾಲಕರ ಮೊಬೈಲ್‌ಗೆ ಸಂದೇಶ ರೂಪದಲ್ಲಿ ಹೋಗಲಿದೆ. ಇಂತಹ ಸಂಶೋಧನೆಯನ್ನು ಸರ್ಕಾರಿ ಶಾಲೆಯ ವಿದ್ಯಾರ್ಥಿಯೊಬ್ಬ ಮಾಡಿರುವುದು ಎಲ್ಲೆಡೆ ಪ್ರಶಂಸೆಗೆ ಕಾರಣವಾಗಿದೆ.
ಈ ವ್ಯವಸ್ಥೆ ಪುತ್ತೂರು ಕೊಂಬೆಟ್ಟು ಸರ್ಕಾರಿ ಪ್ರೌಢಶಾಲೆಯಲ್ಲಿ ಜಾರಿಗೆ ಬಂದಿದ್ದು, ಇದನ್ನು ಕೊಂಬೆಟ್ಟು ಪಿಯು ಕಾಲೇಜಿನ ಉಪ ಪ್ರಾಂಶುಪಾಲ ವಸಂತ ಮೂಲ್ಯ, ಶಿಕ್ಷಕರಾದ ಆಶ್ಲೇಷ್‌ ಕುಮಾರ್‌, ಶಶಿ ಕುಮಾರ್‌ ಮಾರ್ಗದರ್ಶನದಲ್ಲಿ ಅರುಣ್‌ ಕುಮಾರ್‌ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಬೊಳುವಾರಿನ ವಿನೋದ್‌ ಕುಮಾರ್‌ ಹಾಗೂ ರಾಜೇಶ್ವರಿ ದಂಪತಿ ಪುತ್ರರಾಗಿರುವ ಅರುಣ್‌ ಕುಮಾರ್‌ ಪ್ರಸ್ತುತ ನಿಟ್ಟೆ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
"

ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಮೂಲಕ ಇಂತಹ ತಂತ್ರಜ್ಞಾನ ಮಾಹಿತಿಯನ್ನು ಪಡೆಯಲಾಗಿದೆ. ರಸ್ಪೆರ್ರೀ ಪಿಐ5 ಪ್ರೊಸೆಸರ್‌ ಬಳಸಿಕೊಂಡು ಸುಮಾರು 15 ಸಾವಿರ ರೂ. ವೆಚ್ಚ ತಗುಲಿದೆ. ಭಾವಚಿತ್ರ ತೋರಿಸಿ ವಂಚಿಸುವುದನ್ನು ತಪ್ಪಿಸಲು ರೆಟಿನಾ ಸ್ಕ್ಯಾನರ್‌ ಅಳವಡಿಸಲಾಗಿದೆ. 2025 ಜೂ.23ಕ್ಕೆ ಶಾಸಕ ಅಶೋಕ್‌ ಕುಮಾರ್‌ ರೈ ಉದ್ಘಾಟಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಪಡೆದುಕೊಂಡು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.

— ಅರುಣ್‌ ಕುಮಾರ್‌, ತಂತ್ರಜ್ಞಾನ ಅಭಿವೃದ್ಧಿಪಡಿಸಿದ ವಿದ್ಯಾರ್ಥಿ


"

ಕೊಂಬೆಟ್ಟು ಶಾಲೆಯಲ್ಲಿ 6 ತಿಂಗಳಿನಿಂದ ಪ್ರಾಯೋಗಿಕವಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಎಲ್ಲ ಪಾಲಕರ ಮೊಬೈಲ್‌ ನಂಬರ್‌ ಜೋಡಣೆಯಾದರೆ, ಮಕ್ಕಳ ಮುಖ ಚಹರೆಯನ್ನು ದಾಖಲಿಸಿಕೊಂಡು ಸಂದೇಶ ರವಾನಿಸುತ್ತದೆ. ಕಳೆದ ಮೂರು ತಿಂಗಳ ಹಿಂದೆ ವಿದ್ಯಾರ್ಥಿಯನ್ನು ಶಿಕ್ಷಣ ಇಲಾಖೆ ಕರೆಸಿಕೊಂಡು ಮಾಹಿತಿ ಪಡೆದುಕೊಂಡಿತ್ತು.

— ನಾಗರಾಜ ಭಟ್‌, ಉಪ ಪ್ರಾಂಶುಪಾಲ, ಕೊಂಬೆಟ್ಟು