ಜಿಲ್ಲೆ

ದ.ಕ. ಜಿಲ್ಲೆಗೆ ಕಾಶಿಯಾಗಿ ಅರಳಿದ ಪುತ್ತಿಗೆ ಕ್ಷೇತ್ರ : ಭಟ್ಟಾರಕ ಸ್ವಾಮೀಜಿ ಆಶೀರ್ವಚನ

ಸೌಮ್ಯ ಆರ್

ಮೂಡುಬಿದಿರೆ: ಶೈವ, ವೈಷ್ಣವ, ದ್ರಾವಿಡ ಹೀಗೆ ಹಲವು ಸಂಸ್ಕೃತಿಗಳಿಗೆ ಆಶ್ರಯವಿತ್ತ ಚೌಟ ಅರಸರ ಮನೆತನಕ್ಕೆ ಸೇರಿದ ಪುತ್ತಿಗೆಯ ಸೋಮನಾಥನ ಸಾನಿಧ್ಯ ಅದ್ಭುತವಾಗಿ ಪುನಃನಿರ್ಮಾಣವಾಗಿದೆ. ಮೂಡುಬಿದಿರೆ ಜೈನ ಕಾಶಿಯಾದರೆ ಪುತ್ತಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಕಾಶಿಯಾಗಿ ಅರಳಿದೆ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಪುತ್ತಿಗೆಯ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಬಿಜೆಪಿ ದ.ಕ. ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಮಾತನಾಡಿ, ಪುತ್ತಿಗೆ ಹಾಗೂ ಆಸುಪಾಸಿನ ಗ್ರಾಮಸ್ಥರ ಶ್ರಮದಾನ ಮೂರು ಕೋಟಿ ರೂ.ಗೂ ಹೆಚ್ಚಿನ ಉಳಿತಾಯಕ್ಕೆ ಕಾರಣವಾಗಿದೆ ಎಂದರು.

ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ದ.ಕ. ಮಾಜಿ ಸಂಸದ, ಡಿ. ಸುರೇಂದ್ರ ಕುಮಾರ್, ಚೌಟರ ಅರಮನೆ ವೀರೇಂದ್ರ ಎಂ., ದೇವಳದ ಮೊಕ್ತೇಸರ ಕುಲದೀಪ ಎಂ., ಚಾವಡಿ ಮನೆ ಜಗನ್ನಾಥ ಶೆಟ್ಟಿ, ನಿಡೋಡಿ ಜಗನ್ನಾಥ ಡಿ.ಶೆಟ್ಟಿ, ಹಡಿಂಜೆಗುತ್ತು ಅಮರನಾಥ ಡಿ.ಶೆಟ್ಟಿ, ಕೆ.ಪಿ. ಜಗದೀಶ ಅಧಿಕಾರಿ, ವೈಭವ್ ಜಯರಾಮ ಹೆಗ್ಡೆ, ಕೊಡ್ಕಡ್ಕ ಸುದರ್ಶನ್ ಎಂ., ಎಂ.ಬಾಹುಬಲಿ ಪ್ರಸಾದ್, ವಜ್ರನಾಭ ಶೆಟ್ಟಿ, ರಾಮಮೂರ್ತಿ ಉಡುಪ, ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಉಪಸ್ಥಿತರಿದ್ದರು.

ದೇವಳದ ಅಭಿವೃದ್ಧಿ ಕಾರ್ಯಗಳಿಗೆ ಕೊಡುಗೆ ನೀಡಿದವರನ್ನು ಗೌರವಿಸಲಾಯಿತು. ಉಪನ್ಯಾಸಕಿ ಡಾ. ಸುಧಾರಾಣಿ ನಿರೂಪಿಸಿದರು.

12ರಿಂದ 18ನೇ ಶತಮಾನದವರೆಗೆ ದ.ಕ.ಜಿಲ್ಲೆಯಲ್ಲಿ ಆಳ್ವಿಕೆ ನಡೆಸಿದ 13 ಅರಸುಮನೆತನಗಳ ಪೈಕಿ ಚೌಟ ಅರಸು ಮನೆತನದಲ್ಲಿ ವಿಜಯನಗರದ ಚಕ್ರವರ್ತಿ ಶ್ರೀ ಕೃಷ್ಣದೇವರಾಯನನ್ನು ಸಂದರ್ಶಿಸಿ ಗೌರವಿತನಾದ ಮೂರನೇ ತಿರುಮಲ ರಾಯ ಚೌಟ, ಅವನ ಸೊಸೆ ರಾಣಿ ಅಬ್ಬಕ್ಕ ತುಳುನಾಡನ್ನೇ ಪೋರ್ಚುಗೀಸರ ದಾಳಿಯಿಂದ ರಕ್ಷಿಸಿದ ಧೀರೆ. ಧರ್ಮ ಸಮನ್ವಯದ ಸಂಸ್ಕೃತಿ ಪೋಷಿಸಿದ ಈ ರಾಜಮನೆತನದ ಕೊಡುಗೆಗೆ ನಾವು ಕೃತಜ್ಞರಾಗಿರಬೇಕಿದೆ. ಪರಂಪರಾಗತ ಮೌಲ್ಯಗಳಿಗೆ ಒತ್ತು ನೀಡಿ ನಡೆದಿರುವ ದೇವಳದ ನವನಿರ್ಮಾಣ ಮಾದರಿಯಾಗಿದೆ ಡಾ.ಪುಂಡಿಕಾ ಗಣಪಯ್ಯ ಭಟ್, ಇತಿಹಾಸ ತಜ್ಞ