ಉಡುಪಿ: ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಅಕ್ಷಯ ತೃತೀಯ ಪರ್ವದಿನ ಏ.30ರಂದು ಸಾಯಂಕಾಲ 4 ಗಂಟೆಗೆ ಕೃಷ್ಣ ಮಠದ ವಸಂತ ಮಹಲ್ ಮಧ್ವಮಂಟಪದಲ್ಲಿ ಶ್ರೀಕೃಷ್ಣನಿಗೆ ಸುವರ್ಣ ತುಲಾಭಾರ ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತುಲಾಭಾರ ಸ್ಥಳದಲ್ಲಿ ಚಿನ್ನ ಖರೀದಿಸಿ ನೇರ ಸಮರ್ಪಿಸಲು ಹಾಗೂ ಹಳೇ ಚಿನ್ನ ನೀಡಲು ಅವಕಾಶವಿದೆ. ಜೊತೆಗೆ ಶ್ರೀಕೃಷ್ಣನ ಮೂಲ ವಿಗ್ರಹಕ್ಕೆ ಕನಕಾಭಿಷೇಕ ಮಾಡಿದ ಸುವರ್ಣ ಪ್ರಸಾದ ಪಡೆಯಬಹುದಾಗಿದೆ. ಕೃಷ್ಣ ತುಲಾಭಾರಕ್ಕೆ ಬಳಸಿದ ಚಿನ್ನವನ್ನು ನೂತನ ಪಾರ್ಥಸಾರಥಿ ಸುವರ್ಣ ರಥಕ್ಕೆ ಉಪಯೋಗಿಸಲಾಗುವುದು ಎಂದು ಶ್ರೀಗಳು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ದಿವಾನ್ ನಾಗರಾಜ ಆಚಾರ್ಯ, ರಮೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಭಯೋತ್ಪಾದನೆಯನ್ನು ಈವರೆಗೆ ಮಾನಸಿಕ ಸಮಸ್ಯೆ ಎಂಬುದಾಗಿ ತಿಳಿದಿದ್ದೆವು. ಆದರೆ ಮೊನ್ನೆ ಪೆಹಲ್ಗಾಂನಲ್ಲಿ ನಡೆದ ದಾಳಿ ಹಿಂದುಗಳನ್ನು ಗುರಿಯಾಗಿಸಿದ್ದು, ಬಹಳಷ್ಟು ಕಳವಳಕಾರಿಯಾಗಿದೆ. ಇದೊಂದು ವ್ಯವಸ್ಥಿತ ಪಿತೂರಿ. ಧರ್ಮಾಧಾರಿತ ಭಯೋತ್ಪಾದನೆ ಆತಂಕಕಾರಿ. ಇದಕ್ಕೆ ಕೇಂದ್ರ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪುತ್ತಿಗೆ ಮಠ.