ಜಿಲ್ಲೆ

ಹಿಂದು ಧರ್ಮ ಕೆಣಕುವ ದುಷ್ಟ ಪ್ರವೃತ್ತಿ ನಿಲ್ಲಿಸಿ...

* ಜನಿವಾರ ಪ್ರಕರಣಕ್ಕೆ ಪುತ್ತಿಗೆ ಶ್ರೀ ಆಕ್ರೋಶ

ಉಡುಪಿ: ಶಿವಮೊಗ್ಗ ಹಾಗೂ ಬೀದರ್​ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿಚಾರ ಕೇಳಿ ಬಹಳ ಆಘಾತವಾಗಿದೆ. ಇದು ವ್ಯವಸ್ಥಿತವಾದ ಕುತಂತ್ರವೂ ಇರಬಹುದೆಂದು ಅನ್ನಿಸುತ್ತಿದೆ. ಇದು ಹಿಂದು ಧರ್ಮ ಹಾಗೂ ಸನಾತನ ಅನುಯಾಯಿಗಳನ್ನು ಕೆಣಕುವ ದುಷ್ಟ ಪ್ರವೃತ್ತಿಯಾಗಿ ಕಂಡುಬರುತ್ತಿದೆ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಷ್ಟೇ ಅಲ್ಲ, ಇಂತಹ ಅನೇಕ ಘಟನೆಗಳು ಸರಣಿಯಾಗಿ ನಡೆಯುತ್ತಲೇ ಇದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಸಂಬಂಧಪಟ್ಟಂತಹ ದುಷ್ಟರಿಗೆ ತಕ್ಕ ಶಿಕ್ಷೆ ನೀಡಬೇಕು. ಇಲ್ಲದಿದ್ದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗಿ ಸಮಾಜದಲ್ಲಿ ದ್ವೇಷ, ಸಂಘರ್ಷ ಬೆಳೆಯಬಹುದು. ಹೀಗಾಗಿ ಮೂಲದಲ್ಲೇ ಅದನ್ನು ಸರಿಪಡಿಸುವುದು ಜಾಣತನ. ವಿದ್ಯಾರ್ಥಿಯ ಜನಿವಾರ ತೆಗೆಸಿದ ವ್ಯಕ್ತಿಗಳು ಯಾರೆಂದು ಸ್ಪಷ್ಟಪಡಿಸಬೇಕು. ಯಾರೋ ಮಾಡಿದರೆಂದು ಹೇಳುವಂತಾಗಬಾರದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇವೆ ಎಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.