ಜಿಲ್ಲೆ

ಸೆ.16ಕ್ಕೆ ಪರ್ಯಾಯ ಕಾರ್ಯಾಲಯ ಉದ್ಘಾಟನೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಲಯವನ್ನು ರಥಬೀದಿಯ ಸುಗುಣ ಸಭಾಂಗಣದಲ್ಲಿ ಸೆ.16ರಂದು ಸಾಯಂಕಾಲ 4 ಗಂಟೆಗೆ ಸ್ವಾಗತ ಸಮಿತಿ ಗೌರವಾಧ್ಯಕ್ಷ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ ಎಂದು ಸಮಿತಿ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಕೆ. ರುಪತಿ ಭಟ್​ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಹಾಗೂ ಉಪಸಮಿತಿಯ ಪೂರ್ಣಪ್ರಮಾಣದ ಸಭೆ ನಡೆಯಲಿದ್ದು, ಪರ್ಯಾಯ ಲಾಂಛನವನ್ನು ಹೆಗ್ಗಡೆಯವರು ಬಿಡುಗಡೆಗೊಳಿಸಲಿದ್ದಾರೆ. ಸಭೆಯಲ್ಲಿ ಪರ್ಯಾಯ ಮಹೋತ್ಸವದ ರೂಪುರೇಶೆಗಳ ಬಗ್ಗೆ ಸಮಗ್ರ ಚರ್ಚೆ ನಡೆಯಲಿದೆ ಎಂದು ತಿಳಿಸಿದರು. ಪುತ್ತಿಗೆ ಮಠದ ವಿಶ್ವಗಿತಾ ಪರ್ಯಾಯಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ಪ್ರತಿ ಮಂಗಳವಾರ ವಿವಿಧ ಸಮಿತಿಗಳ ಸಭೆ ನಡೆಸಲಾಗುತ್ತಿದೆ. ಪರ್ಯಾಯ ಕಾರ್ಯಕ್ರಮಗಳಿಗೆ 5 ಕೋಟಿ ರೂ. ವೆಚ್ಚ ನಿರೀಸಲಾಗಿದೆ ಎಂದರು.
ಸಿಎಂ ಭೇಟಿ
ಪರ್ಯಾಯಕ್ಕೆ ಶಾಸಕರ ನೇತೃತ್ವದಲ್ಲಿ ಪರ್ಯಾಯ ಸ್ವಾಗತ ಸಮಿತಿಯಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕನ್ನಡ ಮತ್ತು ಸಂಸತಿ ಇಲಾಖೆ ಸಚಿವರನ್ನು ಭೇಟಿ ಮಾಡಿ ಪರ್ಯಾಯ ಮೆರವಣಿಗೆಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಲಾತಂಡಗಳು ಭಾಗವಹಿಸುವಂತೆ ಸಹಕಾರ ಕೋರಲಾಗುವುದು ಎಂದರು. ಉಪಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಕೋಶಾಧಿಕಾರಿ ರಂಜನ್​ ಕಲ್ಕೂರ ಉಪಸ್ಥಿತರಿದ್ದರು.