ಜಿಲ್ಲೆ

ಕೃಷ್ಣನಗರಿಯ ಹೆಗ್ಗುರುತು ಕಿನ್ನಿಮೂಲ್ಕಿ ಸ್ವಾಗತಗೋಪುರ

ಗೋಪಾಲಕೃಷ್ಣ ಪಾದೂರು ಉಡುಪಿ
ಉಡುಪಿಯ ಹೆಗ್ಗುರುತು ಕಿನ್ನಿಮೂಲ್ಕಿ ಸ್ವಾಗತಗೋಪುರ. ರಥದಲ್ಲಿ ಅರ್ಜುನನಿಗೆ ಗೀತೆಯನ್ನು ಬೋಧಿಸುವ ಕೃಷ್ಣನ ಸುಂದರ ಮುಖಾರವಿಂದನ್ನು ನೋಡುತ್ತಾ ಗೋಪುರವನ್ನು ದಾಟಿ ಬರುವಾಗಲೇ ಕೃಷ್ಣಸ್ಮರಣೆಯಲ್ಲಿ ಭಾವುಕ ಭಕ್ತರು ರೋಮಾಂಚನಗೊಳ್ಳುತ್ತಾರೆ. ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ 2ನೇ ಪರ್ಯಾಯ ಅವಧಿಯಲ್ಲಿ ಶ್ರೀ ಸುಧೀಂದ್ರ ತೀರ್ಥ ಶ್ರೀಗಳ ಸ್ಮರಣಾರ್ಥ ಗೋಪುರ ನಿರ್ಮಿಸಿ ಲೋಕಾರ್ಪಣೆಗೊಳಿಸಿದ್ದರು.

1992, ಜ.18ರಂದು ಪರ್ಯಾಯ ಪೀಠಾರೋಹಣಕ್ಕೆ ಕೆಲವೇ ಗಂಟೆಗಳಿಗೆ ಮುನ್ನ ಇದರ ಶಿಲಾನ್ಯಾಸ ನೆರವೇರಿತ್ತು. ದಂಡತೀರ್ಥದಲ್ಲಿ ಸ್ನಾನ ಮುಗಿಸಿ ಜೋಡುಕಟ್ಟೆಗೆ ಆಗಮಿಸುವ ದಾರಿ ಮಧ್ಯೆ ಗೋಪುರಕ್ಕೆ ಶಂಕುಸ್ಥಾಪನೆ ನಡೆದಿದ್ದು, ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್​ ಅವರ ಪುತ್ರ ರಂಗರಾವ್​ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 1993ರ ಮಾರ್ಚ್​ನಲ್ಲಿ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಗೋಪುರ ಉದ್ಘಾಟಿಸಿದ್ದರು.

ಗೋಪುರಕ್ಕಾಗಿ ಹೆದ್ದಾರಿ ನಕ್ಷೆಯಲ್ಲಿ ಮಾರ್ಪಾಡು
2008ರಲ್ಲಿ ರಾಷ್ಟ್ರೀಯ ಹೆದ್ದಾರಿ 66 ( ಹಿಂದಿನ ಹೆಸರು ಎನ್​ಎಚ್​ 17) ಚತುಷ್ಪಥ ಕಾಮಗಾರಿಯಿಂದಾಗಿ ಗೋಪುರದ ಅಸ್ತಿತ್ವಕ್ಕೆ ಧಕ್ಕೆ ಬರುವ ಸಂದರ್ಭ ಒದಗಿಬಂದಿತ್ತು. ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಂದಿನ ಕೇಂದ್ರ ಸಚಿವ ಆಸ್ಕರ್​ಫೆರ್ನಾಂಡಿಸ್​ ಅವರೊಂದಿಗೆ ಮಾತುಕತೆ ನಡೆಸಿದ ಪರಿಣಾಮ ಕಾಮಗಾರಿಯ ನಕ್ಷೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ಅಂಡರ್​ ಪಾಸ್​ ನಿರ್ಮಿಸಲಾಗಿದ್ದು, ನಗರದೊಳಗೆ ಪ್ರವೇಶಿಸುವ ವಾಹನಗಳು ಗೋಪುರವನ್ನು ಹಾದು ಹೋಗುವಂತೆ ಮಾಡಲಾಗಿದೆ.

40 ಲಕ್ಷ ರೂ. ವೆಚ್ಚ
3 ದಶಕದ ಹಿಂದೆ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ 40 ಅಡಿ ಎತ್ತರ ಹಾಗೂ 40 ಅಡಿ ಉದ್ದದ ಈ ಬೃಹತ್​ ಗೋಪುರವನ್ನು ನಿರ್ಮಿಸಲಾಗಿದ್ದು, ಶೇಷಶಯನ ಮಹಾವಿಷ್ಣು, ಹನುಮ, ಭೀಮ, ಮಧ್ವಾಚಾರ್ಯರು, ಕನಕ ದಾಸರು, ಪುರಂದರ ದಾಸರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಮಧ್ಯಭಾಗದ ವೃತ್ತದಲ್ಲಿ ಯಕ್ಷಗಾನ ಶೈಲಿಯ ಕಿರೀಟತೊಟ್ಟಿರುವ ಕೃಷ್ಣನ ಗೀತೋಪದೇಶ ಮಾಡುವ ಕಲಾಕೃತಿ ಆಕರ್ಷಣೀಯವಾಗಿದೆ.

ಗೀತೆಯ ಬಗ್ಗೆ ವಿಶೇಷ ಒಲವು ಹೊಂದಿರುವ ಪುತ್ತಿಗೆ ಶ್ರೀಗಳು ಪಾರ್ಥಸಾರಥಿ ಕೃಷ್ಣನ ಸುಂದರ ಮೂರ್ತಿಯೊಂದಿಗೆ ಗೋಪುರವನ್ನು ನಿರ್ಮಿಸಿ ಉಡುಪಿ ಹೆಗ್ಗುರುತಾಗಿ ಮಾಡಿದ್ದಾರೆ. ಬೆಳೆಯುವ ಉಡುಪಿಯನ್ನು ಗಮನದಲ್ಲಿಟ್ಟುಕೊಂಡು 3 ದಶಕಗಳ ಹಿಂದೆಯೇ ವಿಶಾಲವಾದ ಗೋಪುರ ನಿರ್ಮಿಸಿರುವುದು ಶ್ರೀಗಳ ದೂರದೃಷ್ಟಿಯ ದ್ಯೋತಕ. ಹೀಗಾಗಿ ವಾಹನಗಳು ಈಗಲೂ ಸರಾಗವಾಗಿ ಸಂಚರಿಸಲು ಸಾಧ್ಯವಾಗಿದೆ. -ಸುಧೀಂದ್ರ ಆಚಾರ್ಯ ಹೆಜಮಾಡಿಪುತ್ತಿಗೆ ಮಠ, ಉಡುಪಿ