ಜಿಲ್ಲೆ

ಭಾರತೀಯ ಸಂಸ್ಕೃತಿ ಬೆಳೆಸುವುದು ಆದ್ಯ ಕರ್ತವ್ಯ

ಉಡುಪಿ: ಭಾರತೀಯ ಹಿಂದೂ ಸಂಸ್ಕೃತಿ ಉಳಿಸಿ, ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಹೀಗಾಗಿ ಪರ್ಯಾಯ ಮಹೋತ್ಸವಕ್ಕೆ ಸರ್ಕಾರದಿಂದ ಸರ್ವ ರೀತಿಯ ನೆರವು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಹೇಳಿದರು.

ಬುಧವಾರ ಪುತ್ತಿಗೆ ಮಠದಲ್ಲಿ ಪರ್ಯಾಯ ಸ್ವಾಗತ ಸಮಿತಿ ಕಚೇರಿಗೆ ಭೇಟಿ ನೀಡಿದ ಅವರು, ಪುತ್ತಿಗೆ ಶ್ರೀಗಳು ವಿದೇಶದಲ್ಲೂ ಮಠಗಳನ್ನು ತೆರೆದು ನಮ್ಮ ಸಂಸತಿ ಪಸರಿಸುವ ಕಾರ್ಯ ಮಾಡಿದ್ದಾರೆ. ಆದ್ದರಿಂದ ಪೂಜ್ಯ ಭಾವನೆಯಿಂದ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಮುಂದಿನ ಬಾರಿ ಉಡುಪಿಗೆ ಬಂದಾಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರ್ಯಾಯೋತ್ಸವ ಬಗ್ಗೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಹೇಳಿದರು.

ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ರುಘುಪತಿ ಭಟ್​ ಮಾತನಾಡಿ, ಜ.8ಕ್ಕೆ ಪುತ್ತಿಗೆ ಶ್ರೀಗಳ ಪುರಪ್ರವೇಶ ಜರಗಲಿದ್ದು, 17ರಂದು ರಾತ್ರಿ ಪರ್ಯಾಯ ಶ್ರೀಗಳಿಗೆ ಪೌರ ಸನ್ಮಾನ ನಡೆಯಲಿದೆ. 18ರಂದು ಈ ಬಾರಿ ಬೆಳಗ್ಗೆ ಮತ್ತು ಸಾಯಂಕಾಲ 2 ದರ್ಬಾರ್​ ಆಯೋಜಿಸಲಾಗಿದೆ. ಪರ್ಯಾಯಕ್ಕೆ ಎಲ್ಲಾ ಸರ್ಕಾರಗಳು ಸಹಕಾರ ನೀಡಿದ್ದು, ನಗರದ ಮೂಲ ಸೌಕರ್ಯಕ್ಕೆ ಆನುದಾನ ಒದಗಿಸಿಕೊಡಬೇಕು. ಸಂಸತಿ ಇಲಾಖೆಯಿಂದ ಟ್ಯಾಬ್ಲೋ ಮತ್ತು ಜಾನಪದ ತಂಡಗಳಿಗೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಚಿವರಿಗೆ ಮಹಾಪೋಷಕ ಜವಾಬ್ದಾರಿ ನೀಡಿ ಪ್ರಮಾಣಪತ್ರ ಹಸ್ತಾಂತರಿಸಲಾಯಿತು.

ಮಠದ ದಿವಾನ್​ ನಾಗರಾಜ ಆಚಾರ್ಯ, ಉದ್ಯಮಿ ಪ್ರಸಾದ್​ರಾಜ್​ ಕಾಂಚನ್​, ರಂಜನ್​ ಕಲ್ಕೂರ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್​ ಶೆಟ್ಟಿ ಉಪಸ್ಥಿತರಿದ್ದರು. ರಾಜಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.