ಜಿಲ್ಲೆ

ಸಾಧನೆಗೆ ಸಹಪಾಠಿಗಳ ಸಹಕಾರವೇ ಕಾರಣ

ಪ್ರಶಾಂತ ಜಿ. ಭಾಗ್ವತ

ಪರ್ಯಾಯ ಪುತ್ತಿಗೆ ಸುಗುಣೇಂದ್ರ ಶ್ರೀ ಸಂತಸ | 63ನೇ ಜನ್ಮನಕ್ಷತ್ರ ಆಚರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಸನ್ಯಾಸ ಹಾಗೂ ಧಾರ್ಮಿಕ ಕ್ಷೇತ್ರದ ತಮ್ಮೆಲ್ಲ ಸಾಧನೆಗಳಿಗೆ ಸ್ಫೂರ್ತಿದಾಯಕರಾಗಿ ವಿಬುಧೇಶ ತೀರ್ಥರ ನೆನಪಲ್ಲಿ ವಿಶ್ವಪ್ರಿಯರ ಶ್ರೀಪಾದರನ್ನು, ಗುರು ವಿದ್ಯಾಮಾನ್ಯರ ಪ್ರತೀಕವಾಗಿ ವಿದ್ಯೇಶ ತೀರ್ಥರನ್ನು ಕಾಣುತ್ತಿದ್ದೇವೆ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಸಂತಸ ವ್ಯಕ್ತಪಡಿಸಿದರು.

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಸೋಮವಾರ ರಾತ್ರಿ ನಡೆದ ಸಮಾರಂಭದಲ್ಲಿ ಸಹಪಾಠಿ ಶ್ರೀಪಾದರೊಂದಿಗೆ 63ನೇ ಜನ್ಮನಕ್ಷತ್ರ ಆಚರಿಸಿಕೊಂಡ ಶ್ರೀಗಳು, ಬಾಲ್ಯದ ವಿದ್ಯಾಭ್ಯಾಸ ಕಾಲವನ್ನು ಸ್ಮರಿಸಿಕೊಂಡರು. ನಮ್ಮ ಕರ್ತವ್ಯ ಪ್ರಜ್ಞೆ ಜಾಗೃತಗೊಳಿಸುವ ದಿನವೂ ಇದಾಗಿದೆ ಎಂದರು.

ಆಶೀರ್ವಾದದ ಫಲ

ಈರ್ವರು ಸಹಪಾಠಿಗಳ ಉಪಸ್ಥಿತಿಯಲ್ಲಿ ಜನ್ಮದಿನ ಆಚರಿಸಿಕೊಂಡಿರುವುದು ನಿಜಕ್ಕೂ ವಿಶಿಷ್ಟವಾಗಿದೆ. ಅವರಿಬ್ಬರ ಆಶೀರ್ವಾದದ ಫಲವನ್ನು ನಾವಿಲ್ಲಿ ನೋಡುತ್ತಿದ್ದೇವೆ ಎಂದು ಸುಗುಣೇಂದ್ರ ಶ್ರೀ ಕೃತಜ್ಞತೆ ವ್ಯಕ್ತಪಡಿಸಿ, ಅದಮಾರು ಮಠದ ವಿಶ್ವಪ್ರಿಯ ತೀರ್ಥ ಹಾಗೂ ಭಂಡಾರಕೇರಿಯ ವಿದ್ಯೇಶತೀರ್ಥರನ್ನು ಗಂಧಾದ್ಯುಪಚಾರಗಳಿಂದ ಗೌರವಿಸಿದರು.

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪಯಾರ್ಯಯ ಪುತ್ತಿಗೆ ಸುಗುಣೇಂದ್ರ ಶ್ರೀಗಳು ಜನ್ಮನಕ್ಷತ್ರ ಆಚರಿಸಿಕೊಂಡರು. ವಿಶ್ವಪ್ರಿಯ ಶ್ರೀ, ವಿದ್ಯೇಶ ತೀರ್ಥರು, ಸುಶ್ರೀಂದ್ರ ಶ್ರೀ, ಪ್ರಸನ್ನ ಆಚಾರ್ಯ ಇತರರಿದ್ದರು.

ಎರಡು ಕೃತಿ ಬಿಡುಗಡೆ

ಈ ಸಂದರ್ಭದಲ್ಲಿ ಶ್ರೀಪಾದರು ರಚಿಸಿದ ಎರಡು ಕೃತಿಗಳನ್ನು ಅದಮಾರು ಹಿರಿಯ ಸ್ವಾಮೀಜಿ ಮತ್ತು ಭಂಡಾರಕೇರಿ ಮಠದ ಸ್ವಾಮೀಜಿ ಬಿಡುಗಡೆ ಮಾಡಿದರು. ಕೃತಿ ಸಂಗ್ರಹಿಸಿ, ಪ್ರಕಟಿಸಲು ಶ್ರಮಿಸಿದ ಓಂಪ್ರಕಾಶ ಭಟ್ಟ ಅವರನ್ನು ಪುತ್ತಿಗೆ ಶ್ರೀಪಾದರು ಗೌರವಿಸಿದರು.

ಶ್ರೀಮಠದ ವಿದ್ವಾಂಸ ವಿದ್ವಾನ್​ ಗೋಪಾಲ್​ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಪುಷ್ಪ ಕಿರೀಟ ತೊಡಿಸಿದ ಕಿರಿಯ ಶ್ರೀ

ಪುತ್ತಿಗೆ ಮಠದ ಕಿರಿಯ ಸ್ವಾಮೀಜಿ ಸುಶ್ರೀಂದ್ರ ತೀರ್ಥ ಶ್ರೀಪಾದರು ತನ್ನ ಗುರುಗಳಿಗೆ ಪುಷ್ಪದ ಕಿರೀಟ ತೊಡಿಸಿ ಸಂಭ್ರಮಿಸಿದರು. ಅನೇಕ ವಿದ್ವಾಂಸರ ಹಾಗೂ ಪುತ್ತಿಗೆ ವಿದ್ಯಾಪೀಠದ ಹಳೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪರ್ಯಾಯ ಮಠದ ವತಿಯಿಂದ ದಿವಾನ ನಾಗರಾಜ ಆಚಾರ್ಯ ಮತ್ತು ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಅವರು ಅದಮಾರು ಮತ್ತು ಭಂಡಾರಕೇರಿ ಶ್ರೀಪಾದರಿಗೆ ಮಾಲಿಕೆ ಮಂಗಳಾರತಿ ಮಾಡಿ, ಸಂಸ್ಥಾನ ಗೌರವ ಅರ್ಪಿಸಿದರು. ಪುತ್ತಿಗೆ ಸುಗುಣೇಂದ್ರ ಶ್ರೀಗಳಿಗೆ ಪುತ್ತಿಗೆ ವಿದ್ಯಾಪೀಠದ ಹಳೆಯ ವಿದ್ಯಾರ್ಥಿಗಳು ಮತ್ತು ಮಠದ ಸಿಬ್ಬಂದಿ ಮಾಲಿಕೆ ಮಂಗಳಾರತಿಯೊಂದಿಗೆ ವಿಶೇಷ ಗೌರವ ಅರ್ಪಿಸಿದರು.

ಪುತ್ತಿಗೆ ಸುಗುಣೇಂದ್ರ ಶ್ರೀಪಾದರು ವಿಶ್ವಂಭರನೆನಿಸಿದ ಗಣೇಶನ ಹಬ್ಬದ ದಿನಗಳ ಮಧ್ಯೆ ಜನಿಸಿದವರು. ಹೀಗಾಗಿ ವಿಶ್ವಾದ್ಯಂತ ಧರ್ಮಪ್ರಚಾರ ಮಾಡುತ್ತ, ವಿಶ್ವಂಭರನ ಕೃಪೆಗೆ ಪಾತ್ರರಾಗಿದ್ದಾರೆ. ಶ್ರೀಗಳ ಸಾಧನೆ ಇನ್ನಷ್ಟು ಉತ್ತುಂಗಕ್ಕೇರಲಿ.| ವಿಶ್ವಪ್ರಿಯ ತೀರ್ಥ ಶ್ರೀಪಾದರು. ಅದಮಾರು ಮಠ
ಧರ್ಮ ಪ್ರಚಾರದಲ್ಲಿ ಪುತ್ತಿಗೆ ಶ್ರೀಗಳದ್ದು ಎತ್ತಿದ ಕೈ. ಸುಗುಣ ವಿದ್ಯಾಪೀಠ ಮತ್ತು ಸುಗುಣಮಾಲಾ ಪತ್ರಿಕೆಗಳ ರೂಪದಲ್ಲಿ ಅವರು ಅತ್ಯಂತ ವ್ಯವಸ್ಥಿತವಾಗಿ ಧರ್ಮಪ್ರಚಾರ ನಡೆಸುತ್ತಿರುವುದನ್ನು ಶ್ಲಾಘನೀಯ.| ವಿದ್ಯೇಶ ತೀರ್ಥ ಶ್ರೀಪಾದರು. ಭಂಡಾರಕೇರಿ ಮಠ
ಗುರುಗಳು 63ರಂತಲ್ಲ 36 ವರ್ಷದಂತೆ ಯುವ ಉತ್ಸಾಹದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ, ಅವರ ಅನುಗ್ರಹದಿಂದ ನಾವು ಸಾಧನೆ ಮಾಡುವಂತಾಗಲಿ ಎಂದು ಪ್ರಾರ್ಥಿಸುವೆ.| ಸುಶ್ರೀಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠದ ಕಿರಿಯ ಸ್ವಾಮೀಜಿ