ಉಡುಪಿಯ ಶ್ರೀಕೃಷ್ಣನಿಗೆ ತಿರುಪತಿಯ ಶ್ರೀನಿವಾಸನ ಸನ್ನಿಧಿಯಿದ ಕೊಡುಗೆಯಾಗಿ ಬಂದ ವಸ್ತ್ರವನ್ನು ಪರ್ಯಾಯ ಪುತ್ತಿಗೆ ಶ್ರೀಗಳು ತಲೆಯಮೇಲೆ ಹೊತ್ತು ಶಿಷ್ಯರು ಹಾಗೂ ಭಕ್ತರೊಂದಿಗೆ ರಥಬೀದಿಯಲ್ಲಿ ಮೆರವಣಿಗೆ ನಡೆಸಿದರು. 
ಜಿಲ್ಲೆ

ಗುರು ಪೂರ್ಣಿಮೆಗೆ ಗೀತೆ ಬರೆದು ಗಿಫ್ಟ್ ಕೊಡಿ

ಪರ್ಯಾಯ ಪುತ್ತಿಗೆ ಸುಗುಣೇಂದ್ರ ಶ್ರೀ ಕರೆ | ಗುರುವಂದನಾ ಮಹೋತ್ಸವಕ್ಕೆ ಚಾಲನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಗುರುಪೂರ್ಣಿಮೆಯ ಪ್ರಯುಕ್ತ ಜಗದ್ಗುರು ಶ್ರೀಕೃಷ್ಣನಿಗೆ ಗುರುವಂದನೆ ಸಲ್ಲಿಸಲು ತಾವೆಲ್ಲರೂ ಬಂದಿದ್ದೀರಿ. ಗುರುವಂದನೆ ಸಲ್ಲಿಸುವಾಗ ಗುರುವಿಗೆ ಕಾಣಿಕೆ ಕೊಡಬೇಕು. ಹೀಗಾಗಿ ತಾವುಗಳು ಭಗವದ್ಗೀತೆಯನ್ನು ಬರೆದು ಅದನ್ನು ಗಿಫ್ಟ್ ಆಗಿ ಕೊಡಬೇಕು ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಕರೆ ನೀಡಿದರು.

ಉಡುಪಿಯ ರಾಜಾಂಗಣದಲ್ಲಿ ದಾಸಸಾಹಿತ್ಯ ಪ್ರಾಜೆಕ್ಟ್​ ತಿರುಮಲ ತಿರುಪತಿ ದೇವಸ್ಥಾನಮ್​ ಸಹಭಾಗಿತ್ವದಲ್ಲಿ ಶನಿವಾರ ಆಯೋಜಿಸಿದ್ದ ಗುರುವಂದನಾ ಮಹೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಗೀತೆಯಿಂದ ಕಷ್ಟ ಪರಿಹಾರ

ಯಾರು ಭಗವದ್ಗೀತೆಯನ್ನು ಓದುತ್ತಾರೋ. ಬರೆಯುತ್ತಾರೋ ಅವರೆಲ್ಲರಿಗೂ ಕಷ್ಟ ನಿವಾರಣೆಯಾಗಲಿದೆ. ಭಗವದ್ಗೀತೆ ಎಂದರೆ ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯ. ಹೀಗಾಗಿ ಅವನಿಗೆ ಇಷ್ಟವಾದ ಭಗವದ್ಗೀತೆಯ ಆರಾಧನೆ ಮಾಡಿದರೆ ಜಗದ್ಗುರುವಾದ ಆತ ಎಲ್ಲರ ಕಷ್ಟ ನೀಗಿಸುತ್ತಾನೆ. ಈಗಾಗಲೇ ಗೀತೆ ಬರೆದವರೆಲ್ಲ ತಮ್ಮ ಇಷ್ಟಾರ್ಥ ಈಡೇರಿದ್ದಾಗಿ, ನಮ್ಮ ಕಷ್ಟವೆಲ್ಲ ದೂರವಾಗಿದ್ದಾಗಿ ಹೇಳುತ್ತಿದ್ದಾರೆ. ಹೀಗಾಗಿ ನಮ್ಮ ಈ ಬಾರಿಯ ಪರ್ಯಾಯದ ಅವಧಿಯಲ್ಲಿ ಕೋಟಿ ಗೀತಾ ಲೇಖಜ ಯಜ್ಞ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ತಿರುಪತಿಯ ದಾಸ ಸಾಹಿತ್ಯ ಪ್ರಾಜೆಕ್ಟ್​ನ ಮುಖ್ಯಸ್ಥ ಅನಂದ ತೀರ್ಥಾಚಾರ್​ ಪಗಡಾಲ್​ ಮಾತನಾಡಿ, ಉಡುಪಿಯ ಶ್ರೀಕೃಷ್ಣನ ಮಹತ್ವ ಹಾಗೂ ಚರಿತ್ರೆಯ ಕುರಿತು ಮಾತನಾಡಿದರು. ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಉಸ್ತುವಾರಿ ರಮೇಶ್​ ಭಟ್​ ಹಾಗೂ ಮಠದ ಶಿಷ್ಯರು ಉಪಸ್ಥಿತರಿದ್ದರು.

ತಿರುಪತಿಯಿಂದ ವಸ್ತ್ರ ಕೊಡುಗೆ

ತಿರುಪತಿಯ ಶ್ರೀನಿವಾಸನ ಸನ್ನಿಧಿಯಿಂದ ಉಡುಪಿ ಶ್ರೀಕೃಷ್ಣನಿಗೆ ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ತೊಡಿಸಲು ವಸ್ತ್ರವನ್ನು ಕೊಡುಗೆಯಾಗಿ ನೀಡಲಾಗಿದ್ದು, ಪುತ್ತಿಗೆ ಶ್ರೀಗಳು ಅದನ್ನು ತಲೆಯ ಮೇಲೆ ಹೊತ್ತು ರಥಬೀದಿಯಲ್ಲಿ ಶಿಷ್ಯರೊಂದಿಗೆ ಮೆರವಣಿಗೆ ನಡೆಸಿ ಗೌರವಿಸಿದರು.

ಶೋಭಾಯಾತ್ರೆಗೆ ಚಾಲನೆ

ಜು.21ರ ಗುರುವಂದನಾ ಮಹೋತ್ಸವದ ಹಿನ್ನೆಲೆಯಲ್ಲಿ ಬೃಹತ್​ ಶೋಭಾಯಾತ್ರೆ ಆಯೋಜಿಸಲಾಗಿತ್ತು. ಉಡುಪಿಯ ಜೋಡುಕಟ್ಟೆಯಿಂದ ಆರಂಭವಾದ ಮೆರವಣಿಗೆಗೆ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಚಾಲನೆ ನೀಡಿದರು. ಹಲವಾರು ಭಜನಾ ತಂಡದ 3 ಸಾವಿರಕ್ಕೂ ಅಧಿಕ ಸದಸ್ಯರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.