ಜಿಲ್ಲೆ

ಕೊರಟಗೆರೆಯಲ್ಲಿ ಪುತ್ಥಳಿ ರಾಮಾಯಣ

ತುಮಕೂರು ಡೆಸ್ಕ್

ರಾತ್ರೋರಾತ್ರಿ ಸರ್ಕಲ್​ನಲ್ಲಿ ಪ್ರತಿಷ್ಠಾಪನೆ | ಪುರಸಭೆಯಿಂದ ತೆರವು

ವಿಜಯವಾಣಿ ಸುದ್ದಿಜಾಲ ಕೊರಟಗೆರೆ
ರಾತ್ರೋರಾತ್ರಿ ಪಟ್ಟಣ ಪಂಚಾಯಿತಿ ಸರ್ಕಲ್​ನಲ್ಲಿ ಪ್ರತಿಷ್ಠಾಪಿಸಿದ್ದ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಪಪಂ ಮುಖ್ಯಾಧಿಕಾರಿ ನೇತೃತ್ವದಲ್ಲಿ ತೆರವು ಮಾಡಲು ಮುಂದಾಗುತ್ತಿದ್ದಂತೆ ವಾಲ್ಮೀಕಿ ಸಮಾಜದ ಮುಖಂಡರು ರಾತ್ರಿಯಿಡೀ ಪ್ರತಿಭಟಿಸಿದ ಪರಿಣಾಮ ಪ್ರತಿಭಟನೆ ಬೆನ್ನಲ್ಲೇ ವಾಲ್ಮೀಕಿ ವೃತ್ತದ ನಾಮಫಲಕ ಹಾಗೂ ಪೂಜೆಗೆ ಗುರುವಾರ ಕೊರಟಗೆರೆ ತಾಲೂಕು ಆಡಳಿತವು ಅವಕಾಶ ಕಲ್ಪಿಸಿತಾದರೂ ವಾಲ್ಮೀಕಿ ಪುತ್ಥಳಿ ಮೆರವಣಿಗೆ ಸಾಗಿದ ಬಳಿಕ ಪೊಲೀಸರು ಬಲವಂತವಾಗಿ ನಾಮಫಲಕ ತೆರವುಗೊಳಿಸಿದ "ಪ್ರಹಸನ'ಕ್ಕೆ ಪಟ್ಟಣ ಸಾಯಾಯಿತು.


ಕೊರಟಗೆರೆ ಪಟ್ಟಣದ ಪಪಂ ಮುಂಭಾಗದ ಸರ್ಕಲ್​ನಲ್ಲಿ ಬುಧವಾರ ತಡರಾತ್ರಿ 11.15ಕ್ಕೆ ಮಹರ್ಷಿ ವಾಲ್ಮೀಕಿಯ ಪ್ರತಿಮೆ ದಿಢೀರ್​ ಪ್ರತ್ಯಕ್ಷವಾಗಿದ್ದು, ವಿವಾದ ಸೃಷ್ಟಿಯಾಗಲಿದೆ ಎಂಬ ಕಾರಣಕ್ಕೆ ಎಚ್ಚೆತ್ತುಕೊಂಡ ಪೊಲೀಸ್​, ಕಂದಾಯ ಮತ್ತು ಪಪಂ ಅಧಿಕಾರಿವರ್ಗ ತಡರಾತ್ರಿಯೇ ಸ್ಥಳಕ್ಕೆ ಧಾವಿಸಿ ಪ್ರತಿಮೆ ತೆರವು ಕಾರ್ಯಚರಣೆ ಕೈಗೊಂಡರು. ಇದರಿಂದ ಕೆರಳಿದ ವಾಲ್ಮೀಕಿ ಸಮಾಜದ ಮುಖಂಡರು ವಾಲ್ಮೀಕಿ ಪ್ರತಿಮೆಯನ್ನು ಇದ್ದಲ್ಲಿಯೇ ಸ್ಥಾಪಿಸುವಂತೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ಮುಖಂಡರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.


ತಹಸೀಲ್ದಾರ್​ ಸಂಧಾನ: ಪುತ್ಥಳಿ ಪ್ರತ್ಯಕ್ಷ ವಿಚಾರವಾಗಿ ಗುರುವಾರ ಪ್ರತಿಭಟನೆ ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್​ ಮಂಜುನಾಥ ವಾಲ್ಮೀಕಿ ಸಮಾಜದ ಮುಖಂಡರ ಜತೆ ಚರ್ಚಿಸಿ ನ್ಯಾಯಾಲಯದ ಆದೇಶವನ್ನು ಮನವರಿಕೆ ಮಾಡುವಲ್ಲಿ ಯಶಸ್ವಿಯಾದರು. ಅಲ್ಲದೆ, ತಾತ್ಕಾಲಿಕವಾಗಿ ವಾಲ್ಮೀಕಿ ವೃತ್ತದ ನಾಮಫಲಕ ಮತ್ತು ಪುತ್ಥಳಿಯ ಪೂಜೆಗೆ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ ನಂತರ ಪರಿಸ್ಥಿತಿ ತಿಳಿಯಾಯಿತು.

ನಾಮಫಲಕ ತೆರವು..!
ಈ ಹಿನ್ನೆಲೆಯಲ್ಲಿ ವಾಲ್ಮೀಕಿ ಸಮಾಜದ ಮುಖಂಡರು ಮಹರ್ಷಿಯ ಪುತ್ಥಳಿಯ ಜತೆಗೆ ಕೊರಟಗೆರೆ ಪಟ್ಟಣದಲ್ಲಿ ಮೆರವಣಿಗೆ ಮಾಡುತ್ತಿರುವ ವೇಳೆಯಲ್ಲೇ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ನೇತೃತ್ವದಲ್ಲಿ ಮಹರ್ಷಿ ವಾಲ್ಮೀಕಿ ವೃತ್ತ ಎಂದು ಅಳವಡಿಸಿದ್ದ ನಾಮಫಲಕವನ್ನು ಕ್ಷಣಾರ್ಧದಲ್ಲಿ ತೆರವು ಮಾಡಲಾಯಿತು. ಇದರಿಂದ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಈ ವೇಳೆ ಸಮಾಜದ ಮುಖಂಡರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ತೀವ್ರಗೊಂಡಿತ್ತು. ನಂತರ ಪೊಲೀಸರು ಸರ್ಕಲ್​ಅನ್ನು ತಮ್ಮ ವಶಕ್ಕೆ ಪಡೆದು ಬ್ಯಾರಿಕೇಡ್​ ಅಳವಡಿಸಿ ಭದ್ರಕೋಟೆ ನಿರ್ಮಿಸಿದರು.

ಪ್ರತಿಷ್ಠಾಪಿಸಿದವರ್ಯಾರು?
ಪಪಂ ಸರ್ಕಲ್​ನಲ್ಲಿ ಬುಧವಾರ ರಾತ್ರಿ 11.15ರ ವೇಳೆ ಮಹರ್ಷಿ ವಾಲ್ಮೀಕಿ ಪುತ್ಥಳಿ ಪ್ರತ್ಯಕ್ಷ$ವಾಗಿದ್ದು, ಪುತ್ಥಳಿಯನ್ನು ಯಾರು ಪ್ರತಿಷ್ಠಾಪಿಸಿದ್ದಾರೆಂಬುದು ಇನ್ನೂ ಪತ್ತೆಯಾಗಿಲ್ಲ. ಸರ್ಕಲ್​ನಲ್ಲಿ ಕಟ್ಟಡ ಕಟ್ಟಿದವರು ಯಾರು, ಪುತ್ಥಳಿ ತಂದು ಸಮುದಾಯ ಮತ್ತು ಅಧಿಕಾರಿಗಳ ನಡುವೆ ಗೊಂದಲ ಸೃಷ್ಟಿಗೆ ಕಾರಣ ಯಾರು ಎಂಬುದರ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ.

ಬೂದಿಮುಚ್ಚಿದ ಕೆಂಡದಂತಿದೆ ಪಟ್ಟಣ
ಪುತ್ಥಳಿ ತೆರವು ವಿವಾದ ಬೆನ್ನಲ್ಲೇ ಪಟ್ಟಣದಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು, ರಾತ್ರಿ ಪೊಲೀಸ್​ ಸರ್ಪಗಾವಲು ಹಾಕಲಾಗಿದ್ದು, ಎಎಸ್ಪಿ ವಿ.ಮರಿಯಪ್ಪ, ತುಮಕೂರು ನಗರ ಡಿವೈಎಸ್ಪಿ ಚಂದ್ರಶೇಖರ್​, ರಾಮಚಂದ್ರಪ್ಪ ನೇತೃತ್ವದಲ್ಲಿ ಸುಮಾರು 20 ಸಿಪಿಐ, 40 ಪಿಎಸ್​ಐ, ಕೆಎಸ್​ಆರ್​ಪಿ ತುಕುಡಿ ಸೇರಿ 500ಕ್ಕೂ ಅಧಿಕ ಪೊಲೀಸರು ರಾತ್ರಿಯಿಡಿ ಕೊರಟಗೆರೆ ಪಟ್ಟಣದಲ್ಲಿ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.

ಸುಪ್ರೀಂಕೋರ್ಟ್​ ಆದೇಶದಂತೆ ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ಸ್ಥಾಪಿಸಲು ಅವಕಾಶವಿಲ್ಲ. ಪ್ರತಿಭಟನೆ ಮಾಡುತ್ತಿದ್ದ ವಾಲ್ಮೀಕಿ ಸಮಾಜದ ಮುಖಂಡರ ಮನವೊಲಿಸಲಾಗಿದೆ. ಕೊರಟಗೆರೆ ಪಟ್ಟಣದಲ್ಲಿ ನಾಲ್ಕೈದು ಮಹನೀಯರ ಪುತ್ಥಳಿ ಸ್ಥಾಪನೆಯ ಅಹವಾಲು ತಾಲೂಕು ಆಡಳಿತದ ಮುಂದಿದ್ದು, ತ್ವರಿತವಾಗಿ ಪ್ರತಿಮೆಗಳ ಸ್ಥಾಪನೆಗೆ ಸ್ಥಳ ಪರಿಶೀಲನೆ ನಡೆಸಲಾಗುವುದು.ಕೆ.ಮಂಜುನಾಥ್​ ತಹಸೀಲ್ದಾರ್​. ಕೊರಟಗೆರೆ ಯಾರೋ ಪುಣ್ಯಾತ್ಮರು ಮಹರ್ಷಿ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದಾರೆ. ಪಪಂ ಮುಖ್ಯಾಧಿಕಾರಿ ವಾಲ್ಮೀಕಿ ಪ್ರತಿಮೆ ದಿಢೀರ್​ ತೆರವು ಮಾಡುವ ಅಗತ್ಯ ಏನಿತ್ತು?. ಅಧಿಕಾರಿಗಳೇ ಪಟ್ಟಣದಲ್ಲಿನ ಇನ್ನಿತರ ಪ್ರತಿಮೆಗಳ ತೆರವು ಕಾರ್ಯಾಚರಣೆ ಏಕಿಲ್ಲ?. ವಾಲ್ಮೀಕಿ ಜಯಂತಿ ದಿನವೇ ಮಹರ್ಷಿಗೆ ಅಧಿಕಾರಿಗಳು ಅಪಮಾನ ಮಾಡಿದ್ದಾರೆ.| ಮಂಜುನಾಥ, ಪಪಂ ಮಾಜಿ ಸದಸ್ಯ. ಕೊರಟಗೆರೆ