ಗದಗ: ಪಂ. ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯತಿಥಿಯನ್ನು ನಾಡಿನ ತುಂಬಾ ನೂರಾರು ಕಡೆ ಆಗುತ್ತಿದೆ ಎನ್ನುವುದಕ್ಕೆ ಅವರ ನಾಡಿಗೆ ಅರ್ಪಿಸಿದ ಅಮೂಲ್ಯ ಸೇವೆ ಕಾರಣವಾಗಿದೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜ. ಗುರುಸಿದ್ಧ ರಾಜ ಯೋಗಿಂದ್ರ ಮಹಾಸ್ವಾಮಿಗಳು ಹೇಳಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಸೋಮವಾರ ಗಾನಯೋಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ವತಿಯಿಂದ ಜರುಗಿದ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 13ನೇ ಪುಣ್ಯ ಸ್ಮರಣೋತ್ಸವ, ಶಿವಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿ ಪ್ರಧಾನ ಹಾಗೂ ಅಹೋರಾತ್ರಿ ಸಂಗೀತ ಸ್ವರ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗವಾಯಿಗಳವರು ಕವಿ, ತ್ರಿಭಾಷಾ ವಿಷಾರಧರು, ಹಲವಾರು ಸಂಗೀತ ಸಾಧನಗಳ ವಾದಕರು, ಕೀರ್ತನಾಕಾರರು, ಪುರಾಣ ವಚನಕಾರರಲ್ಲದೆ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಅವರು ಶಿವಯೋಗ ಸಾಧಕರಾಗಿದ್ದಾರೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯವಾಗಿದೆ.ಗುರುಗಳ ಆಶ್ರಮದಿಂದ ಸಾಕಷ್ಟು ಶಿಷ್ಯರು ಸಂಸ್ಕಾರ, ಶಿಕ್ಷಣ ಪಡೆದು ಖ್ಯಾತನಾಮರಾಗಿದ್ದಾರೆ. ಗುರುಗಳ ಇಚ್ಛೆಯಂತೆ ಪೂಜ್ಯ ಕಲ್ಲಯ್ಯಜ್ಜನವರು ಆಶ್ರಮವನ್ನು ಮುನ್ನಡೆಸುತ್ತಿದ್ದಾರೆ.ಈ ಮಠವನ್ನು ಉತ್ತುಂಗದ ಸ್ಥಿತಿಗೆ ಒಯಲು ಗುರುಕೃಪೆಯಾಗಿದೆ ಎಂದು ಹೇಳಿದರು.
ಅಥಣಿಯ ಮಠದ ಪ್ರಭು ಚೆನ್ನಬಸವ ಮಹಾಸ್ವಾಮಿಗಳು ಮಾತನಾಡಿ, ಜಗತ್ತಿಗೆ ಬೆಳಕನ್ನು ನೀಡಿದವರು ಪಂ. ಪುಟ್ಟರಾಜ ಕವಿ ಗವಾಯಿಗಳವರು. ಅವರು ಮಕ್ಕಳಲ್ಲಿ ದೈವತ್ವ ಕಂಡು ಅವರ ಬದುಕಿಗೆ ಕಲ್ಪತರು ಆಗಿದ್ದಾರೆ. ಆಕಾಶದಲ್ಲಿ ನಕ್ಷತ್ರಗಳು ಇರುವಂತೆ ಭೂಮಿಯ ಮೇಲೆ ಅನೇಕ ನಕ್ಷತ್ರಗಳಿವೆ ಅವುಗಳಲ್ಲಿ ಪುಟ್ಟರಾಜ ಕವಿ ಗವಾಯಿಗಳು ಒಬ್ಬರಾಗಿದ್ದಾರೆ. ಗುರುಗಳು ನಮ್ಮ ಮನದಲ್ಲಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಿ. ಕುಮಾರದಾಸ ಗವಾಯಿಗಳು, ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜಣ್ಣ ಜೇವರ್ಗಿ, ಪ್ರವಚನ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೇ. ಶಿವಮೂರ್ತಿಯ ಶಾಸ್ತ್ರಿಗಳು ಹಿರೇಮಠ ಹಾಗೂ ಸಮಾಜಸೇವೆಯಲ್ಲಿ ಸಾಧನೆ ಮಾಡಿದ ನಿಂಗಪ್ಪ ನರ್ಚಿಯವರಿಗೆ ಶಿವಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಅಡ್ಡೂರ್ ದಾಸೋಹ ಮಠದ ಪೂಜ್ಯಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪರಮ ಪೂಜ್ಯಶ್ರೀ ಡಾ. ಕಲ್ಲಯ್ಯಜ್ಜನವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಎಸ್. ವಿ. ಸಂಕನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಗಾನಯೋಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಅಧ್ಯಕ್ಷ ಸಿದ್ಧೇಶ್ವರ ಶಾಸ್ತ್ರಿಗಳು ಕಲ್ಲೂರ, ಉಪಾಧ್ಯಕ್ಷ ಬಸವರಾಜ ಹೊನ್ನಿಗನೂರ, ಕಾರ್ಯದರ್ಶಿ ಬೆಟದಯ್ಯ ಶಾಸ್ತ್ರಿಗಳು ಹಿರೇಮ್ಯಾಗೇರಿ, ಅನಿಲ್ ಅಬ್ಬಿಗೇರಿ, ಬಿ. ಶ್ರೀರಾಮುಲು ಅವರ ಆಪ್ತ ಸಹಾಯಕ ಎಸ್. ಹೆಚ್. ಶಿವನಗೌಡ, ಉದ್ಯಮಿ ಕಿರಣ್ ಭೂಮಾ, ಆನಂದ ಗುಡಿಮನಿ, ಪಂಚಾಕ್ಷರಿ ಹಿಡ್ಕಿಮಠ, ಮುದುಕಯ್ಯ ಸ್ವಾಮಿ ಹಿರೇಮಠ, ಸಿದ್ದಲಿಂಗೇಶ ಮೂರಶೀಳ್ಳಿನ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಂದಾನಪ್ಪ ವಿಭೂತಿ ಅವರ ರಚಿಸಿದ ಬೆಟ್ಟವಾಗಿ ಬೆಳೆದ ಪುಟ್ಟರಾಜರು ಗ್ರಂಥವನ್ನು ಬಿಡುಗಡೆ ಮಾಡಲಾಯಿತು. ಹರಿಹರದ ಜಾನ್ಹವಿ ಕಾಟವೆ ಅವರು ಭರತನಾಟ್ಯ ಪ್ರದರ್ಶಿಸಿದರು. ವೆಂಕಟೇಶ ಆಲ್ಕೋಡ್ ಪ್ರಾರ್ಥಿಸಿದರು.