ಮಂಡ್ಯ: ಸರಳತೆಯ ನಡೆ ಹಾಗೂ ವಿಭಿನ್ನ ಕಾರ್ಯಕ್ರಮದ ಅನುಷ್ಠಾನದ ಮೂಲಕವೇ ಜನಮೆಚ್ಚುಗೆ ಗಳಿಸಿರುವ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಜನ್ಮದಿನವನ್ನು ತಾಲೂಕಿನ ಹೊಳಲು ಗ್ರಾಮದಲ್ಲಿ ಹಬ್ಬದಂತೆ ಆಚರಣೆ ಮಾಡಲಾಯಿತು. ಅಂತೆಯೇ ದುದ್ದ ಹೋಬಳಿಯ ರೈತ ಸಂಘ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನರ ಅಭಿಮಾನಕ್ಕೆ ದರ್ಶನ್ ಪುಟ್ಟಣ್ಣಯ್ಯ ಭಾವುಕರಾದರು.
ಹೊಳಲು ಗ್ರಾಮದಲ್ಲಿ ಬಹಿರಂಗ ವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 55 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು. ಇದಲ್ಲದೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮಂಡ್ಯ ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್, ಮದ್ದೂರು ತಹಸೀಲ್ದಾರ್ ಡಾ.ಸಿತ್ಮಾ ರಾಮು, ನಿವೃತ್ತ ಸೈನಿಕ ಮಲ್ಲಿಗೆರೆ ಪ್ರಕಾಶ್ ಅವರಿಗೆ ಪುಟ್ಟಣ್ಣಯ್ಯ ಹೆಸರಿನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕರ್ತರು ಹಾಗೂ ಕೆ.ಎಸ್.ಪುಟ್ಟಣ್ಣಯ್ಯ ಕುಟುಂಬದ ಅಭಿಮಾನಿಗಳು ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೃಹತ್ ಹೂವಿನ ಹಾರ ಹಾಕುವುದರ ಜತೆಗೆ ಕೇಕ್ ಕತ್ತರಿಸಿಸಿ ಜನ್ಮದಿನವನ್ನು ಆಚರಣೆ ಮಾಡಿದರು. ದುದ್ದ ಹೋಬಳಿಯ ಜನರ ಪ್ರೀತಿಯನ್ನು ಕಂಡು ದರ್ಶನ್ ಪುಟ್ಟಣ್ಣಯ್ಯ ಮತ್ತು ತಾಯಿ ಸುನೀತಾ ಪುಟ್ಟಣ್ಣಯ್ಯ ಭಾವುಕಗೊಂಡರು.
ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಕೆ.ಎಸ್.ಪುಟ್ಟಣ್ಣಯ್ಯ ಅವರು ರೈತರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತಿದ್ದನ್ನು ನೋಡಿದರೆ ಖುಷಿ ಎನ್ನಿಸುತ್ತಿತ್ತು. ಯಾವುದೇ ಹೋರಾಟವಾದರೂ ತಾರ್ಕಿಕ ಅಂತ್ಯ ಮುಟ್ಟಿಸುತ್ತಿದ್ದರು. ಅದು ಅವರ ಬದ್ಧತೆಯಾಗಿತ್ತು. ಅಂತಹ ಧೀಮಂತ ನಾಯಕನ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಪ್ರಶಂಸನೀಯ. ಇನ್ನು ಈಗ ಅವರ ಹಾದಿಯಲ್ಲಿಯೇ ದರ್ಶನ್ ಕೂಡ ಸಾಗುತ್ತಿದ್ದಾರೆ. ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಹೊಸ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಮುಖ್ಯಮಂತ್ರಿ, ಸಚಿವರ ಸಹಕಾರದಿಂದ ಅನುಷ್ಠಾನಗೊಳಿಸುತ್ತಿದ್ದಾರೆ. ಮುಂದೆಯೂ ಅವರಿಗೆ ಹೆಚ್ಚಿನ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ಮಂಡ್ಯ ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಮೊದಲ ಬಾರಿಗೆ ಶಾಸಕರಾದರೂ ದರ್ಶನ್ ಪುಟ್ಟಣ್ಣಯ್ಯ ವಿಭಿನ್ನ ಆಲೋಚನೆ ಮೂಲಕ ರಾಜ್ಯದ ಗಮನ ಸೆಳೆಯುತ್ತಿದ್ದಾರೆ. ಸರ್ಕಾರಿ ಸೇವೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಕಾರ್ಯಕ್ರಮ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಚ್.ಪಿ.ರಾಮು, ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ, ಕಾಂಗ್ರೆಸ್ ಮುಖಂಡರೂ ಆದ ಪ್ರಥಮ ದರ್ಜೆ ಗುತ್ತಿಗೆದಾರರ ಹರ್ಷ ಬೀರಗೌಡನಹಳ್ಳಿ, ಪಟೇಲ್‌ರಾಮು, ನಿಂಗೇಗೌಡ, ಜಟ್ಟಿಕುಮಾರ್, ಶ್ಯಾಂ, ಅಭಿನಂದನ್, ನವೀನ್‌ಗೌಡ, ಮನೋಹರ್, ಪ್ರಸನ್ನಕುಮಾರ್, ಚಂದನ್ ಇತರರಿದ್ದರು. ವೇದಿಕೆ ಕಾರ್ಯಕ್ರಮದ ಬಳಿಕ ಹಾಸ್ಯ ಹಾಗೂ ರಸಮಂಜರಿ ಜನರಿಗೆ ಮನರಂಜನೆ ನೀಡಿತು.
ದುದ್ದ ಹೋಬಳಿ ಜನರ ಪ್ರೀತಿಗೆ ಅಭಾರಿಯಾಗಿದ್ದೇನೆ. ಹಿರಿಯರ ಮಾರ್ಗದರ್ಶನ ಪಡೆದು ಅಭಿವೃದ್ಧಿ ಕೆಲಸ ಮಾಡುತ್ತೇನೆ. ರೈತರು ತಮ್ಮ ಕೆಲಸಕ್ಕಾಗಿ ಪ್ರತಿದಿನ ಸರ್ಕಾರಿ ಕಚೇರಿಗೆ ಅಲೆಯುತ್ತಿದ್ದರು. ಇದನ್ನು ಮನಗಂಡು ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ ರೂಪಿಸಿ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಸ್ಯೆ ಬಗೆಹರಿಸುವ ಕೆಲಸ ನಡೆಯುತ್ತಿದೆ. ಇದರಿಂದ ರೈತರ ಅಲೆದಾಟ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಿದೆ. ನನ್ನ ಜನ್ಮದಿನದಿಂದ ಕಾರ್ಯಕರ್ತರು ನಮ್ಮ ತಂದೆ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿದ್ದಾರೆ. ಅವರ ಪ್ರೀತಿಗೆ ಧನ್ಯವಾದ ತಿಳಿಸುತ್ತೇನೆ.ದರ್ಶನ್ ಪುಟ್ಟಣ್ಣಯ್ಯಮೇಲುಕೋಟೆ ಶಾಸಕ ಧೀಮಂತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಹಾದಿಯಲ್ಲೇ ನಡೆಯುತ್ತಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ತಮ್ಮ ವಿಭಿನ್ನ ಆಲೋಚನೆ ಹಾಗೂ ಕಾರ್ಯವೈಖರಿಯಿಂದಾಗಿ ಮೇಲುಕೋಟೆ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಮಾತ್ರವಲ್ಲದೆ ಸರಳತೆಯಿಂದ ಜನರೊಂದಿಗೆ ಬೆರೆತು ಅವರ ಒಳಿತಿಗಾಗಿ ಕೆಲಸ ಮಾಡುತ್ತಿರುವುದು ಪ್ರಶಂಸನೀಯ.ಹರ್ಷ ಬೀರಗೌಡನಹಳ್ಳಿಕಾಂಗ್ರೆಸ್ ಮುಖಂಡ