ಹೊಸಕೋಟೆಯ ಕೆಇಬಿ ವೃತ್ತದ ಪಾದಚಾರಿ ಮಾರ್ಗದಲ್ಲಿ ಬಟ್ಟೆ ಅಂಗಡಿ ಆರಂಭವಾಗಿರುವುದು. 
ಜಿಲ್ಲೆ

ಹೊಸಕೋಟೆ ಮತ್ತೆ ಒತ್ತು‘ವರಿ’

ಶಿವರಾಜ.ಎಂ


ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಹೊಸಕೋಟೆ ನಗರದ ಕೆಇಬಿ ವೃತ್ತದ ಪಾದಚಾರಿ ಮಾರ್ಗದಲ್ಲಿ ಪುಟ್‌ಪಾತ್ ಅಂಗಡಿಗಳ ಕಿರಿಕಿರಿ ಮತ್ತೆ ಆರಂಭವಾಗಿದೆ.
ಈ ಹಿಂದೆ ಪುಟ್‌ಪಾತ್ ಒತ್ತುವರಿ ಮಾಡಿಕೊಂಡು ಉದ್ದಕ್ಕೂ ಬಟ್ಟೆ ಅಂಗಡಿ, ತರಕಾರಿ, ಹಣ್ಣು ವ್ಯಾಪಾರ, ಹೂವಿನ ಅಂಗಡಿಗಳು ಸೇರಿ ಇನ್ನಿತರ ಪುಟ್‌ಪಾತ್ ಅಂಗಡಿಗಳನ್ನು ತೆರೆದು ಪಾದಚಾರಿಗಳ ಸಂಚಾರಕ್ಕೆ ತೊಂದರೆ ಎದುರಾಗಿತ್ತು. ಸಾರ್ವಜನಿಕರ ಆಗ್ರಹದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಅಂಗಡಿಗಳನ್ನು ತೆರವುಗೊಳಿಸಿ ಪಾದಚಾರಿಗಳ ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದರು. ಇದೀಗ ಸದ್ದಿಲ್ಲದೆ ಒಂದೊಂದೆ ಅಂಗಡಿಗಳು ಆರಂಭವಾಗುತ್ತಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ವಾರದಿಂದ ಬಟ್ಟೆ ಅಂಗಡಿ: ಕಳೆದ ವಾರದಿಂದ ಇದ್ದಕ್ಕಿದ್ದಂತೆ ಬಟ್ಟೆ ಅಂಗಡಿಯೊಂದು ತಲೆಎತ್ತಿದೆ, ವಾರಾಂತ್ಯದ ದಿನಗಳಲ್ಲಿ ಇಲ್ಲಿ ಬಟ್ಟೆ ವ್ಯಾಪಾರಕ್ಕಾಗಿ ದ್ವಿಚಕ್ರ ಸೇರಿ ಇನ್ನಿತರ ವಾಹನ ಸವಾರರು ತಮ್ಮ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುವುದರಿಂದ ಈ ಭಾಗದಲ್ಲಿ ಟ್ರಾಫಿಕ್ ಕಿರಿಕಿರಿ ಎದುರಾಗಿದೆ. ಈ ಬಟ್ಟೆ ಅಂಗಡಿ ಆರಂಭದ ಬಳಿಕ ಇದರಿಂದ ಉತ್ತೇಜಿತರಾದ ಇನ್ನಿತರರು ಪುಟ್‌ಪಾತ್‌ನಲ್ಲಿ ಇನ್ನಿತರ ಅಂಗಡಿಗಳನ್ನು ಆರಂಭಿಸಲು ಮುಂದಾಗಿದ್ದಾರೆ. ಈ ಬಗ್ಗೆ ತಕ್ಷಣ ನಗರಸಭೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಇಲ್ಲವಾದರೆ ಮತ್ತೆ ಸಮಸ್ಯೆ ಮರುಕಳಿಸಲಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೆಆರ್ ರಸ್ತೆಯಲ್ಲೂ ಒತ್ತುವರಿ: ಇನ್ನು ನಗರದ ಕೆಆರ್ ರಸ್ತೆಯ ಪಾದಚಾರಿ ಮಾರ್ಗದಲ್ಲಿಯೂ ಪುಟ್‌ಪಾತ್ ಅಂಗಡಿಗಳು ತಲೆ ಎತ್ತಿದ್ದು ಮತ್ತೆ ಟ್ರಾಫಿಕ್ ಕಿರಿಕಿರಿ ಎದುರಾಗುತ್ತಿದೆ, ಪಾದಚಾರಿಗಳು ವಾಹನಗಳ ನಡುವೆ ರಸ್ತೆಯಲ್ಲಿ ಓಡಾಡುವಂತಾಗಿದೆ, ವಾಹನಗಳ ಅಡ್ಡಾದಿಡ್ಡಿ ನಿಲುಗಡೆಯಿಂದ ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ವಾಹನದಟ್ಟಣೆಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅನಧಿಕೃತ ಪ್ಲೆಕ್ಸ್‌ಗಳಿಗೆ ಬ್ರೇಕ್ ಹಾಕಬೇಕು:

ನಗರದ ಕೆಇಬಿ ವೃತ್ತದಲ್ಲಿ ಇದಕ್ಕೆ ಮುನ್ನ ಇಲ್ಲಿ ಹೂವಿನ ಅಂಗಡಿಗಳಿಂದ ಜನರಿಗೆ ಸಾಕಷ್ಟು ಕಿರಿಕಿರಿಯಾಗುತ್ತಿತ್ತು ಎಂದು ಅದನ್ನು ತೆರವುಗೊಳಿಸಿದರು.ಕಳೆದೊಂದು ವಾರದಿಂದ ದಿಢೀರ್ ಪಾದಚಾರಿ ಮಾರ್ಗದಲ್ಲಿ ಬಟ್ಟೆ ಅಂಗಡಿ ಪ್ರಾರಂಭಿಸಿದ್ದಾರೆ.ಶನಿವಾರ ಭಾನುವಾರ ಮತ್ತು ಸಂಜೆಯ ಸಮಯದಲ್ಲಿ ಅಂಗಡಿ ಮುಂದೆ ಗ್ರಾಹಕರು ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಿ ಹೋಗುತ್ತಾರೆ ಆಗ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ. ಈ ಅಂಗಡಿಯವನನ್ನು ನೋಡಿ ನಾಳೆ ಇನ್ನೊಬ್ಬ ಅದೇ ಜಾಗದಲ್ಲಿ ಅಂಗಡಿ ತೆರೆಯುತ್ತಾನೆ. ಈ ಬಗ್ಗೆ ನಗರ ಸಭೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು.

ಎನ್.ನಾಗೇಶ್, ಹೊಸಕೋಟೆ ನಿವಾಸಿ

ನಗರದ ಕೆಇಬಿ ವೃತ್ತ ಹಾಗೂ ಕೆಆರ್ ರಸ್ತೆಯಲ್ಲಿ ಆಗಾಗ ಪುಟ್‌ಪಾತ್ ಅಂಗಡಿಗಳು ತಲೆ ಎತ್ತುತ್ತಿರುತ್ತವೆ ಹಾಗೇ ಬಿಟ್ಟರೆ ಇಡೀ ರಸ್ತೆಯನ್ನೇ ಆಕ್ರಮಣ ಮಾಡಿಕೊಳ್ಳುತ್ತಾರೆ. ಅವರ ಹೊಟ್ಟೆಪಾಡು ಎನ್ನುವುದಾದರೆ ಅವರನ್ನು ತರಕಾರಿ ಮಾರುಕಟ್ಟೆಗೆ ಸ್ಥಳಾಂತರ ಮಾಡುವಂತೆ ಮಾಡಿ. ಇದರಿಂದ ಟ್ರಾಫಿಕ್ ಕಿರಿಕಿರಿ ಸಮಸ್ಯೆ ತಪ್ಪುತ್ತದೆ.

ಅನಿಲ್‌ಕುಮಾರ್, ಹೊಸಕೋಟೆ ನಿವಾಸಿ