ಮೇಲುಕೋಟೆಯ ಪುತಿನ ಕಲಾಮಂದಿರಲ್ಲಿ ಕವಿ ಪುತಿನ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿ.ಬಾಲಕೃಷ್ಣ ಪುತಿನ ಕೃತಿಗಳ ಕುರಿತ ಕವಿಯ ಕನ್ನಡಿ ಕೃತಿ ಬಿಡುಗಡೆ ಮಾಡಿದರು. 
ಜಿಲ್ಲೆ

ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿದ ಶ್ರೇಷ್ಠಕವಿ ಪುತಿನ

ಮಾದೇಶ್ ತಿ.ನರಸೀಪುರ

ಮೇಲುಕೋಟೆ: ಸಾಹಿತ್ಯ ಕೃಷಿಯಲ್ಲಿ ಮಾನವೀಯ ಮೌಲ್ಯ ಹಾಗೂ ಸಂಬಂಧಗಳಿಗೆ ಹೆಚ್ಚು ಒತ್ತು ನೀಡಿದ ಶ್ರೇಷ್ಠಕವಿ ಪು.ತಿ.ನರಸಿಂಹಾಚಾರ್(ಪುತಿನ) ಎಂದು ಕವಿ ಡಾ.ಚಿಂತಾಮಣಿ ಕೂಡ್ಲೆಕೆರೆ ಬಣ್ಣಿಸಿದರು.


ಮೇಲುಕೋಟೆಯಲ್ಲಿ ಕವಿ ಪುತಿನ ಪುಣ್ಯಸ್ಮರಣೆ ಅಂಗವಾಗಿ ಪುತಿನ ಟ್ರಸ್ಟ್ ಆಯೋಜಿಸಿದ್ದ ಕವಿಯ ಕನ್ನಡಿ ಪುಸ್ತಕ ಬಿಡುಗಡೆ ಮತ್ತು ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.


ಮೇಲುಕೋಟೆಯ ಪರಿಸರ ಸಂಸ್ಕೃತಿ, ಆಚಾರ ವಿಚಾರಗಳು, ಧಾರ್ಮಿಕ ಅನುಷ್ಠಾನಗಳು, ಉತ್ಸವಗಳು ಕವಿ ಪುತಿನ ಅವರ ಮೇಲೆ ಗಾಢವಾದ ಪ್ರಭಾವ ಬೀರಿದೆ. ಆಚಾರ ವಿಚಾರ ಹಾಗೂ ಪರಂಪರೆಯ ಅನಾವರಣದ ಜತೆ ಕವಿಯ ಸಾಹಿತ್ಯದಲ್ಲಿ ಮಾನವೀಯ ಮೌಲ್ಯವನ್ನು ಹೆಚ್ಚಾಗಿ ಕಾಣಬಹುದು. ನಾಡಿನ ಮಹೋನ್ನತ ಕವಿಯ ಸಾಹಿತ್ಯದ ಸಾರಭೂತವಾಗಿ ಕವಿಯ ಕನ್ನಡಿ ರಚಿಸುವ ಅವಕಾಶ ದೊರೆತು ಕೃತಿ ಬಿಡುಗಡೆಯಾಗುತ್ತಿರುವುದು ಬಹುದೊಡ್ಡ ಸೌಭಾಗ್ಯ ಎಂದೇ ಭಾವಿಸಿದ್ದೇನೆ. ವಿದ್ಯಾರ್ಥಿಗಳು ಹಾಗೂ ಯುವ ಜನತೆ ಕವಿ ಪುತಿನ ಬಗ್ಗೆ ತಿಳಿದುಕೊಳ್ಳಬೇಕು. ಅವರ ಸರಳ ಸಾಹಿತ್ಯ ಕೃತಿಗಳನ್ನು ಓದಬೇಕು. ಕವನಗಳನ್ನು ಕೇಳಬೇಕು. ಇದರಿಂದ ಮಾನವೀಯ ಮೌಲ್ಯ ಹಾಗೂ ಪರಂಪರೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.


ಪುತಿನ ಟ್ರಸ್ಟ್ ಅಧ್ಯಕ್ಷ ವಿದ್ವಾನ್ ಡಿ.ಬಾಲಕೃಷ್ಣ ಮಾತನಾಡಿ, ಸಾಹಿತ್ಯಾಸಕ್ತರು ಕವಿವರ್ಯ ಪು.ತಿ.ನ. ಅವರ ರಸಗ್ರಂಥ ಮತ್ತು ಕವಿಯ ಕನ್ನಡಿ ಪುಸ್ತಕ ಓದಬೇಕು. ಕವಿಯ ಪರಿಚಯ ಇಂದಿನ ಜನಾಂಗಕ್ಕೆ ಅದರಲ್ಲೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತಲುಪಬೇಕು. ಅದಕ್ಕಾಗಿ ಇದೇ ಪ್ರಥಮ ಬಾರಿಗೆ ಪ್ರೌಢಶಾಲಾ ಮಕ್ಕಳಿಗೆ ಪುತಿನ ಕುರಿತು ಭಾಷಣ ಹಾಗೂ ಭಾವಗೀತೆಗಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಎಂದು ಹೇಳಿದರು.


ಕವಿ ಬದುಕಿದ್ದಾಗಲೇ ರಚಿತವಾದ ಪುತಿನ ಟ್ರಸ್ಟ್ ಮೇಲುಕೋಟೆಯ ಮನೆಯನ್ನು ಸಾಂಸ್ಕೃತಿಕ ಸ್ಮರಣೆಯಾಗಿ ಉಳಿಸಿಕೊಂಡು ರಂಗಮಂದಿರ ನಿರ್ಮಿಸಿದೆ. ಈವರೆಗೆ ಪು.ತಿ.ನ. ಅವರರ 14 ಪುಸ್ತಕಗಳು 6 ಧ್ವನಿಸುರಳಿಗಳನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ಕಲಾಮಂದಿರವನ್ನು ನವೀಕರಣ ಮಾಡಲಾಗಿದೆ. ಒಟ್ಟಾರೆ ಪುತಿನ ಆಶಯ ಈಡೇರಿಸಲು ಶಕ್ತಿಮೀರಿ ಶ್ರಮಿಸಲಾಗುತ್ತಿದೆ. ಮುಂಬರುವ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕವಿ ಪುತಿನ ಅವರ ಕೃತಿಗಳನ್ನು ರಿಯಾಯಿತಿ ದರದಲ್ಲಿ ಸಾಹಿತ್ಯಾಸಕ್ತರಿಗೆ ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.


ಟ್ರಸ್ಟ್ ಗೌರವಾಧ್ಯಕ್ಷ ಡಾ.ಎಚ್.ಎಸ್.ವಿ…..ಟ್ರಸ್ಟ್ ಕಾರ್ಯದರ್ಶಿ ಡಾ.ಆನಂದರಾಮ ಉಪಾಧ್ಯ, ಸದಸ್ಯರಾದ ಡಾ.ಎಚ್.ವಿ ರವೀಶ್, ರಂಗಕರ್ಮಿ ಡಾ.ಬಿ.ವಿ.ರಾಜಾರಾಂ, ಕೆ.ಎನ್ ರವಿ, ಟ್ರಸ್ಟ್ ವ್ಯವಸ್ಥಾಪಕ ಸಂಜಯ್, ಸ್ಥಳೀಯ ಕಲಾಮಂದಿರ ವ್ಯವಸ್ಥಾಪಕ ವೆಂಕಟೇಶ್, ಪರಿಸರ ತಜ್ಞ ಸಂತೋಷ್ ಕೌಲಗಿ, ಬಾಲಕರ ಶಾಲೆ ಮುಖ್ಯಶಿಕ್ಷಕ ಸಂತಾನರಾಮನ್ ಇದ್ದರು.


ಪುತಿನ ಕುರಿತ ಕವಿಯ ಕನ್ನಡಿ ಪುಸ್ತಕ ಬಿಡುಗಡೆ ಮಾಡಲಾಯಿತು. ಭಾಷಣ ಸ್ಪರ್ಧೆಯಲ್ಲಿ ಮಹದೇಶ್ವರ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿನಿ ಮೌಲ್ಯಶ್ರೀ ಪ್ರಥಮ, ಯದುಶೈಲ ಪ್ರೌಢಶಾಲೆಯ ಖುಷ್ಬು ದ್ವೀತಿಯ, ಜಕ್ಕನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಚರಣ ತೃತೀಯ ಬಹುಮಾನ ಪಡೆದರೆ, ಭಾವಗೀತೆಯಲ್ಲಿ ಜಕ್ಕನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಜಲಜಾಕ್ಷಿ ಪ್ರಥಮ, ಅಭಿಲಾಷ್ ತೃತೀಯ ಹಾಗೂ ಮಹದೇಶ್ವರ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿನಿ ಸಿಂಚನಾ ದ್ವಿತೀಯ ಬಹುಮಾನ ಪಡೆದರು ವಿಜೇತರಿಗೆ ಕವಿಯ ಕನ್ನಡಿ ಕೃತಿ, ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು