ಜಿಲ್ಲೆ

ಚಿಲ್ಲರೆ ಕಾಸು ಹಾಕಿ, ನೋಟು ಕದಿಯುತ್ತಿರುವ ಸರ್ಕಾರ

ಮೈಸೂರು: ಕುರುಡು ಭಿಕ್ಷುಕನ ಮುಂದೆ ಚಿಲ್ಲರೆ ಕಾಸು ಹಾಕಿ, ಆತನಿಂದ ನೋಟುಗಳನ್ನು ಸದ್ದಿಲ್ಲದೆ ಕದಿಯುವ ರೀತಿಯಲ್ಲಿ ರಾಜ್ಯ ಸರ್ಕಾರ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.


ಆಲನಹಳ್ಳಿಯಲ್ಲಿರುವ ಕುದೇರು ಮಠದ ಶಾಖೆಯಾದ ತೋಂಟದಾರ್ಯ ಸ್ವಾಮೀಜಿ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಗುರುಮಲ್ಲೇಶ್ವರರ, ಶ್ರೀ ಗುರುಲಿಂಗ ಸ್ವಾಮೀಜಿಯವರ ಗಣರಾಧನೆ, ಪ್ರಾರ್ಥನಾ ಮಂದಿರ ಉದ್ಘಾಟನೆ, ಶ್ರೀ ಗುರುಶಾಂತ ಸ್ವಾಮೀಜಿ ಅವರಿಗೆ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ಒಂದು ಕಡೆ ಗ್ಯಾರಂಟಿ ಯೋಜನೆಯ ಮೂಲಕ ಜನರಿಗೆ ಉಚಿತ ಕೊಡುಗೆ ಕೊಟ್ಟರೆ, ಅದನ್ನು ಸರಿದೂಗಿಸಿಕೊಳ್ಳಲು ತೈಲದರ ಏರಿಕೆ, ವಿವಿಧ ಸರ್ಕಾರಿ ಶುಲ್ಕ ಏರಿಕೆ ಮಾಡಿ ಜನರ ದುಡ್ಡನ್ನು ಮತ್ತೊಂದು ಕಡೆಯಿಂದ ಕಿತ್ತುಕೊಳ್ಳುತ್ತಿದೆ ಎಂದು ಗುಡುಗಿದರು.


ರಾಜ್ಯ ಸರ್ಕಾರದ ನೀತಿಗಳಿಂದ ಜನರು ಪರಿತಪಿಸುತ್ತಿದ್ದಾರೆ. ಬಿತ್ತನೆ ಬೀಜಗಳ ದರ ಶೇ.40-50ರಷ್ಟು ಏರಿಕೆಯಾಗಿದೆ. ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಮತ್ತಷ್ಟು ತೊಂದರೆ ನೀಡಲಾಗುತ್ತಿದೆ ಎಂದು ದೂರಿದರು.


ಸರ್ಕಾರವು ಮಠಮಾನ್ಯಗಳನ್ನು ಯಾವ ದೃಷ್ಟಿಕೋನದಿಂದ ನೋಡುತ್ತಿದೆ ಎಂಬುದನ್ನು ಗಮನಿಸಬೇಕು. ಆಧುನಿಕ ಯುಗದಲ್ಲಿ ಮಠಮಾನ್ಯಗಳ ಕುರಿತು ಜನರ ಕಾಳಜಿ, ಪ್ರೀತಿ, ಶ್ರದ್ಧೆ ಕಡಿಮೆಯಾಗಿದೆ. ಹೀಗಾಗಿಯೇ ಜನಸಮೂಹದ ಕೊಂಡಿಯಾಗಿರುವ ಮತ್ತು ಜನರನ್ನು ಸರಿದಾರಿಗೆ ತೆಗೆದುಕೊಂಡು ಹೋಗುವ ಸಮಾಜವೇ ಇದೀಗ ಕವಲುದಾರಿಯಲ್ಲಿ ಸಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಮಠಗಳ ಕುರಿತು ಒಲವು ಕಡಿಮೆಯಾಗಲು ಯುವ ಜನರಲ್ಲಿ ಸಂಸ್ಕಾರದ ಕೊರತೆಯೇ ಕಾರಣ. ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನೆರವಾಗುತ್ತಿದ್ದಾರೆ. ಆದರೆ, ಅವರು ಬೆಳೆದ ಬಳಿಕ ಪಾಲಕರು, ಮಠಮಾನ್ಯಗಳನ್ನು ನೆನಪು ಮಾಡಿಕೊಳ್ಳುತ್ತಿಲ್ಲ. ಇದರಿಂದ ಸಮಾಜ ಅಸ್ತವ್ಯಸ್ತವಾಗಿದೆ. ಮಕ್ಕಳನ್ನು ಮಠಗಳಿಗೆ ಕರೆತಂದು ಸಂಸ್ಕಾರ ಕೊಡಿಸಬೇಕು. ಇಲ್ಲವಾದರೆ ಸಮಾಜ ಉದ್ಧಾರವಾಗಲ್ಲ ಎಂದು ಎಚ್ಚರಿಸಿದರು.


ವೀರಶೈವ ಲಿಂಗಾಯತ ಮಠಗಳು ದಾಸೋಹ ಪರಂಪರೆಗೆ ಶಕ್ತಿ ತುಂಬುವ ಕೆಲಸ ಮಾಡಿವೆ. ಅನ್ನ, ಜ್ಞಾನ ದಾಸೋಹದ ಮೂಲಕ ನಾಡಿಗೆ ಬಲವನ್ನೂ ತುಂಬಿವೆ. ಇದರ ಫಲವಾಗಿಯೇ ಯುವ ಜನರು ಐಎಎಸ್, ಐಪಿಎಸ್, ರಾಜಕಾರಣಿಗಳು, ಕೋಟ್ಯಾಧೀಶರು ಬೆಳೆಯಲು ಸಾಧ್ಯವಾಗಿದೆ. ಇದನ್ನು ಯಾರೂ ಮರೆಯಬಾರದು ಎಂದರು.

ಜಾ.ದಳಕ್ಕೆ ಅದೃಷ್ಟ:


ಜಾ.ದಳಕ್ಕೆ ಈಗ ಅದೃಷ್ಟ ಬಂದಿದೆ. ಇದು ಹೇಗೆ ಬರುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ಆದ್ದರಿಂದ ಆ ಪಕ್ಷದ ನಾಯಕರ ಮೇಲೆ ಅಭಿಮಾನವೂ ಇದೆ, ಭಯವೂ ಇದೆ ಎಂದು ವಿಜಯೇಂದ್ರ ಹಾಸ್ಯ ಚಟಾಕಿ ಹಾರಿಸಿದರು.